ಮಹೇಶ್ ಜೋಶಿ ವಿರುದ್ಧದ ಆರೋಪಗಳಿಗೆ ಸಾಕ್ಷಿ ನೀಡುವಂತೆ ಸಾಹಿತಿ-ಚಿಂತಕರಿಗೆ ನೋಟೀಸ್

ಮಹೇಶ್ ಜೋಶಿ
ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಶಿ ಅವರ ವಿರುದ್ಧ ಮಾಡಿರುವ ಆರೋಪಗಳಿಗೆ ಸಾಕ್ಷಿ ನೀಡುವಂತೆ ಸಾಹಿತಿಗಳು ಮತ್ತು ಚಿಂತಕರಿಗೆ ಲೀಗಲ್ ನೋಟಿಸ್ ನೀಡಲಾಗಿದೆ.
ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಹಿರಿಯ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ, ಆರ್.ಜಿ.ಹಳ್ಳಿ ನಾಗರಾಜ್, ಲೇಖಕಿ ಡಾ. ವಸುಂಧರ ಭೂಪತಿ, ಹೋರಾಟಗಾರ್ತಿಯರಾದ ಕೆ.ಎಸ್.ವಿಮಲಾ, ಸುನಂದ ಜಯರಾಂ, ಸಂಸ್ಕೃತಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್, ಸಾಮಾಜಿಕ ಕಾರ್ಯಕರ್ತ ಎನ್.ಹನುಮೇಗೌಡ ಸೇರಿದಂತೆ ಹಲವು ಮಂದಿಗೆ ಲೀಗಲ್ ನೋಟಿಸ್ ನೀಡಲಾಗಿದೆ.
ಎ.24ರಂದು ಸಹಕಾರ ಸಂಘಗಳ ಉಪನಿಬಂಧಕರಿಗೆ ನೀಡಿದ ದೂರು ಸತ್ಯಕ್ಕೆ ದೂರವಾಗಿದೆ ಎಂದು ದೂರಿನಲ್ಲಿ ಸಹಿ ಮಾಡಿರುವ ಅನೇಕರಿಗೆ ನೋಟೀಸ್ ನೀಡಿ, 15 ದಿನಗಳಲ್ಲಿ ಉತ್ತರಿಸಲು ತಿಳಿಸಲಾಗಿದೆ.
‘ಮಹೇಶ್ ಜೋಶಿ ಅವರ ಗಮನವನ್ನು ಉದ್ದೇಶಪೂರ್ವಕವಾಗಿ ಬೇರೆಡೆಗೆ ತಿರುಗಿಸುವ ಪ್ರಯತ್ನ ನಡೆದಿದೆ. ಇದು ಕನ್ನಡ-ಕನ್ನಡಿಗ-ಕರ್ನಾಟಕ ವಿರೋಧಿ ನಿಲುವನ್ನು ಪ್ರತಿಬಿಂಬಿಸುವುದಲ್ಲದೆ, ಬಳ್ಳಾರಿ ಸಮ್ಮೇಳನದ ವಿಶ್ವಾಸಾರ್ಹತೆಯನ್ನು ಭಂಗಗೊಳಿಸುವ ಮತ್ತು ನಾಶಮಾಡುವ ಯೋಜನೆಯನ್ನು ಹೊಂದಿದೆ’ ಎಂದು ನೋಟೀಸ್ನಲ್ಲಿ ಉಲ್ಲೇಖಿಸಲಾಗಿದೆ.
‘ಕಾನೂನು ಸೂಚನೆಗಳನ್ನು ಸ್ವೀಕರಿಸಿದ 15 ದಿನಗಳ ಒಳಗೆ ದೂರಿನ ವಿಷಯಗಳನ್ನು ಓದಿ ಅರ್ಥಮಾಡಿಕೊಂಡು ದೃಢೀಕರಿಸಿದ ನಂತರ ದೂರು ಸಲ್ಲಿಸಬಹುದು, ಇಲ್ಲದಿದ್ದರೆ ಎ.24ರಂದು ನೀಡಿದ ದೂರಿಗೆ ಸಹಿ ಮಾಡಿರುವುದನ್ನು ದೃಢೀಕರಿಸಿದ್ದೀರಿ ಎಂದು ಭಾವಿಸಲಾಗುತ್ತದೆ. ಜತೆಗೆ ದೂರಿನಲ್ಲಿ ಉಲ್ಲೇಖಿಸಲಾದ ಎಲ್ಲ ಆರೋಪಗಳಿಗೆ ದೃಢವಾದ ಸಾಕ್ಷಿ-ಪುರಾವೆಗಳೊಂದಿಗೆ ಸಾಬೀತುಪಡಿಸುವ ಜವಾಬ್ದಾರಿ ನಿಮ್ಮ ಮೇಲಿರುತ್ತದೆ’ ಎಂದು ತಿಳಿಸಲಾಗಿದೆ.
ನೋಟೀಸ್ಗೆ ಹೆದರುವುದಿಲ್ಲ: ‘18 ಜನರಿಗೆ ಕಾನೂನು ನೋಟೀಸ್ ನೀಡಿದ್ದಾರೆ. ನನಗೆ ವಾಟ್ಸ್ ಆಪ್ನಲ್ಲಿ ಬಂದಿದೆ. ಕನ್ನಡ ಸಾಹಿತ್ಯ ಪರಿಷತ್ನಿಂದ ಇಂಗ್ಲಿಷ್ನಲ್ಲಿ ನೋಟೀಸ್ ಕಳುಹಿಸಿದರೆ ನಾವು ಯಾಕೆ ಉತ್ತರಿಸಬೇಕು. ಕನ್ನಡದಲ್ಲಿ ಕಳುವಹಿಸಬೇಕಿತ್ತು. ವ್ಯಕ್ತಿ ಸ್ವಾತಂತ್ರ್ಯವನ್ನು ಹರಣ ಮಾಡುವ ರೀತಿಯಲ್ಲಿ ಸರ್ವಾಧಿಕಾರಿತನವನ್ನು ತೋರಿಸುತ್ತಿರುವ ನೋಟೀಸ್ ಆಗಿದೆ. ಬ್ಲಾಕ್ಮೇಲ್ ಮಾಡಲು ಈ ನೋಟೀಸ್ ಕಳಿಸಿದ್ದಾರೆ. ಅದಕ್ಕೆ ನಾವು ಹೆದುರುವುದಿಲ್ಲ’ ಎಂದು ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ತಿಳಿಸಿದ್ದಾರೆ.







