ಕರ್ನಾಟಕ ಮಾದರ ಮಹಾಸಭಾದ ನೊಂದಣಿ ಅಭಿಯಾನಕ್ಕೆ ಚಾಲನೆ
ಸಮುದಾಯದ ಬಲವರ್ದನೆಗೆ ನೋಂದಣಿ ಮಾಡಿಸಿ : ಕೆ.ಎಚ್.ಮುನಿಯಪ್ಪ

ಬೆಂಗಳೂರು : ರಾಜ್ಯದಲ್ಲಿ ಒಕ್ಕಲಿಗರ ಸಂಘ, ವೀರಶೈವ ಮಹಾಸಭಾ, ಕುರುಬರ ಸಂಘದ ರೀತಿಯಲ್ಲಿ ನಮ್ಮ ಮಾದರ ಮಹಾಸಭಾ ಕಟ್ಟಲು ತೀರ್ಮಾನಿಸಿದ್ದು, ಪದಾಧಿಕಾರಿಗಳು ಸಮುದಾಯದ ಸದಸ್ಯತ್ವ ನೊಂದಣಿ ಮಾಡಿಸಲು ಮುಂದಾಗಬೇಕು ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಕರೆ ನೀಡಿದ್ದಾರೆ.
ರವಿವಾರ ಇಲ್ಲಿನ ಗಾಂಧಿ ಭವನದಲ್ಲಿ ಕರ್ನಾಟಕ ಮಾದರ ಮಹಾಸಭಾವು ಆಯೋಜಿಸಿದ್ದ ‘ಸದಸ್ಯತ್ವ ನೋಂದಣಿ ಅಭಿಯಾನ ಸಭೆ’ಯಲ್ಲಿ ಮಾತನಾಡಿದ ಅವರು, ಸಮುದಾಯ ಸಂಘದ ಪ್ರಾರಂಭ ಸುಮಾರು 12 ವರ್ಷಗಳಿಂದಲೂ ನಡೆಯುತ್ತಿದೆ. ಆದರೆ ಇದಕ್ಕೆ ಸರಿಯಾದ ನೆಲೆ ಇಲ್ಲ. ಹೀಗಾಗಿ ಮಾದರ ಮಹಾಸಭಾವನ್ನು ಮಾಡಲು ನಾವು ಈಗ ತೀರ್ಮಾನಿಸಿದ್ದೇವೆ. ಸಮುದಾಯದ ಬಲವರ್ದನೆಗಾಗಿ ಮಹಾಸಭಾದ ಸದಸ್ಯತ್ವ ಅಭಿಯಾನದಲ್ಲಿ ನೋಂದಣಿ ಮಾಡಿಸಬೇಕು ಎಂದರು.
ನಾವು ಇಷ್ಟು ದಿನವಾದರೂ, ಸಮುದಾಯದ ಸಂಘ ಕಟ್ಟುವಲ್ಲಿ ವಿಫಲರಾಗಿದ್ದೇವೆ. ಕೆಲಸದ ಒತ್ತಡದಿಂದ ಸಮಯದಾಯವನ್ನು ಬಲಪಡಿಸುವಲ್ಲಿಯೂ ವಿಫಲರಾಗಿದ್ದೇವೆ. ಯಾವುದೇ ಪಕ್ಷದಲ್ಲಿರಲಿ, ಪಕ್ಷವನ್ನು ಬದಿಗಿಟ್ಟು, ಮುಂಚೂಣಿ ನಾಯಕರಾದ ಜನ ಪ್ರತಿನಿಧಿಗಳು ಈ ಮಹಾಸಭಾವನ್ನು ಕಟ್ಟುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಅವರು ತಿಳಿಸಿದರು.
ಮಹಾಸಭಾವನ್ನು ಉನ್ನತ ಮಟ್ಟದಲ್ಲಿ ಬೆಳೆಸಲು ಹಾಗೂ ಸಂಘಕ್ಕೆ ಶಾಶ್ವತ ನೆಲೆಯನ್ನು ಕೊಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗುತ್ತದೆ. ಸಂಘಕ್ಕೆ ನಿವೇಶನ ಮೀಸಲಿಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.
ಸಮುದಾಯದ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಕೊಡುವುದು ಮಹಾಸಭಾದ ಪ್ರಮುಖ ಉದ್ದೇಶವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಾದ ಐಎಎಸ್, ಕೆಎಎಸ್ ಪರೀಕ್ಷೆಗಳಿಗೆ ತರಬೇತಿ ನೀಡಲಾಗುವುದು. ಸಮುದಾಯದ ಜನರ ಸಂಕಷ್ಟಕ್ಕೆ ಸ್ಪಂದಿಸಲು ನೆರವಾಗುವಂತೆ ದೊಡ್ಡ ಮಟ್ಟದಲ್ಲಿ ಮಹಾಸಭಾವನ್ನು ಕಟ್ಟಬೇಕು. ನಾವೆಲ್ಲಾರು ಪಕ್ಷಾತೀತವಾಗಿ ಕಟ್ಟಲು ಪ್ರಾಮಾಣಿಕವಾಗಿ ಪ್ರಯತ್ನವನ್ನು ಮಾಡುತ್ತೇವೆ ಎಂದು ಅವರು ತಿಳಿಸಿದರು.
ಮಹಾಸಂಘವು ರಾಜ್ಯಮಟ್ಟದಲ್ಲಿ ಸಮಿತಿ ರಚಿಸಿ ನಂತರ ಜಿಲ್ಲಾ ಹಂತದಲ್ಲಿ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಬೈಲಾ ಸಿದ್ದಪಡಿಸಲಾಗಿದೆ. ಈ ಸಮಿತಿಗೆ 30 ಜನರ ಸದಸ್ಯರ ಆಯ್ಕೆ ಮಾಡಬೇಕಾಗಿದೆ. ತಾಲ್ಲೂಕು ಮಟ್ಟದಲ್ಲಿಯೂ ಮಾದರ ಮಹಾ ಸಭಾ ಇರಲಿದೆ. ರಾಜ್ಯ ಮಟ್ಟದ ಸಮಿತಿಯ ಚುನಾವಣೆ ನಡೆಸಿ ಹಂತ ಹಂತವಾಗಿ ಮಹಾಸಭಾವನ್ನು ಬಲಪಡಿಸಲು ನಿರ್ದರಿಸಿದ್ದೇವೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಮಾಜಿ ಸಚಿವ ಎಚ್.ಆಂಜನೇಯ, ರಾಜ್ಯಸಭೆ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ, ಮಾಜಿ ಸಂಸದ ಚಂದ್ರಪ್ಪ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
ಕರ್ನಾಟಕ ಮಾದರ ಮಹಾಸಭಾದ ಸಾಮಾನ್ಯ ಸದಸ್ಯತ್ವಕ್ಕೆ 500 ರೂ. ಪಾವತಿ ಮಾಡಬೇಕಾಗುತ್ತದೆ. ಅಜೀವ ಸದಸ್ಯತ್ವ 25ಸಾವಿರ ರೂ., ಪೋಷಕ ಸದಸ್ಯತ್ವ 50 ಸಾವಿರ ರೂ. ಮತ್ತು ಮಹಾ ಪೋಷಕ ಸದಸ್ಯತ್ವ ಸದಸ್ಯರಾಗಲು 1ಲಕ್ಷ ರೂ.ಗಳನ್ನು ನಿಗದಿಪಡಿಸಿದ್ದು, ಸಮುದಾಯದ ಸದಸ್ಯರು ನೊಂದಣಿ ಮಾಡಿಕೊಳ್ಳಬಹುದು.







