ಬೆಂಗಳೂರು | ದ್ವಿಚಕ್ರ ವಾಹನಕ್ಕೆ ಕಾರು ಢಿಕ್ಕಿ: ಇಬ್ಬರು ಮೃತ್ಯು

ಬೆಂಗಳೂರು: ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಗ್ರಾಮದ ಬಳಿ ವರದಿಯಾಗಿದೆ.
ಘಟನೆಯಲ್ಲಿ ಆಂಧ್ರ ಮೂಲದ ಇಬ್ಬರು ಮೃತಪಟ್ಟಿದ್ದು, ಅಪಘಾತದ ದೃಶ್ಯ ಹೆದ್ದಾರಿಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಯುವಕರು ದ್ವಿಚಕ್ರ ವಾಹನದಲ್ಲಿ ದೇವನಹಳ್ಳಿ ಕಡೆಯಿಂದ ದೊಡ್ಡಬಳ್ಳಾಪುರ ಕಡೆಗೆ ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ಕಾರು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದು, ಸುಮಾರು 100 ಮೀಟರ್‍ನಷ್ಟು ತಳ್ಳಿಕೊಂಡು ಹೋಗಿದೆ. ನಂತರ ದ್ವಿಚಕ್ರ ವಾಹನ ಪಕ್ಕಕ್ಕೆ ಸರಿಯುತ್ತಿದ್ದಂತೆ ಕಾರು ನಿಲ್ಲಿಸದೇ ವಾಹನ ಸಮೇತ ಚಾಲಕ ಪರಾರಿಯಾಗಿದ್ದಾನೆ. ಈ ವೇಳೆಯಲ್ಲಿ ದ್ವಿಚಕ್ರ ವಾಹನದ ಚಾಲಕ ಸೇರಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ವಿಶ್ವನಾಥಪುರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡು ಸಿಸಿ ಕ್ಯಾಮರಾ ದೃಶ್ಯದ ಆಧಾರದ ಮೇಲೆ ಆರೋಪಿ ಪತ್ತೆಗೆ ಮುಂದಾಗಿರುವುದಾಗಿ ತಿಳಿಸಿದ್ದಾರೆ.





