ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕ್ರಮಕ್ಕಾಗಿ ಸಿಎಂಗೆ ಆರ್.ಅಶೋಕ್ ಪತ್ರ

ಬೆಂಗಳೂರು : ರಾಜ್ಯದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿಪಕ್ಷ ನಾಯಕ ಆರ್.ಅಶೋಕ್ ಸೋಮವಾರ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಹಾವಳಿ ಹೆಚ್ಚಾಗಿದ್ದು, ರಾಜ್ಯದ ಪ್ರತಿ ಜಿಲ್ಲೆ ಹಾಗೂ ಪ್ರತಿ ತಾಲೂಕಿನಲ್ಲೂ ಹರಡಿಕೊಳ್ಳುತ್ತಿದ್ದಾರೆ. ಇವರು ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವುದಲ್ಲದೆ, ನಮ್ಮ ಧಾರ್ಮಿಕ ನಂಬಿಕೆಗಳಿಗೂ ಸಹ ಧಕ್ಕೆ ತರುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.
ಇತ್ತೀಚೆಗೆ ಬಾಂಗ್ಲಾ ವಲಸಿಗರು ಚಿಕ್ಕಮಗಳೂರಿನಲ್ಲಿ ಆಕಳು ಕೆಚ್ಚಲನ್ನು ಕೊಯ್ದು, ಹಸುವಿನ ಮಾಂಸವನ್ನು ಕತ್ತರಿಸಿದ್ದು, ಪತ್ರಿಕೆಗಳಲ್ಲಿ ವರದಿಯಾಗಿದೆ. ಅಲ್ಲದೆ, ಇವರು ಕರ್ನಾಟಕ ಮತ್ತು ದೇಶದ ಅನೇಕ ರಾಜ್ಯಗಳಲ್ಲೂ ಸಹ ನೆಲೆಸಿದ್ದು, ಅನೇಕ ಕಡೆ ಡಕಾಯಿತಿ, ಕಳ್ಳತನ, ಅತ್ಯಾಚಾರ ಪ್ರಕರಣಗಳಲ್ಲೂ ಈ ಅಕ್ರಮ ಬಾಂಗ್ಲಾ ವಲಸಿಗರು ಭಾಗಿಯಾಗಿರುವುದರ ಬಗ್ಗೆ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇಂತಹ ಅಕ್ರಮಗಳನ್ನು ತಡೆಗಟ್ಟಲು ಸರಕಾರವು ಯಾವುದೇ ಕ್ರಮಗಳನ್ನು ಕೈಗೊಳ್ಳದೇ ಇರುವುದು ವಿಷಾದನೀಯ ಸಂಗತಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪೊಲೀಸ್ ಇಲಾಖೆಯು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಒಂದು ಅಭಿಯಾನ ಮಾಡಿ ರಾಜ್ಯದ ಜನರಲ್ಲಿ ಜಾಗೃತಿ ಮೂಡಿಸಿ, ಅಕ್ರಮ ಬಾಂಗ್ಲಾ ವಲಸಿಗರನ್ನು ಪತ್ತೆಹಚ್ಚುವಂತೆ ಇಲಾಖೆಗೆ ನಿರ್ದೇಶನ ನೀಡಬೇಕು. ರಾಜ್ಯದಿಂದ ಇವರನ್ನು ಹೊರಹಾಕುವ ಕಾರ್ಯಕೈಗೊಂಡು ಶಾಂತಿ ಸುವ್ಯವಸ್ಥೆ ಸ್ಥಾಪಿಸುವ ಕೆಲಸವಾಗಬೇಕು ಎಂದು ಆರ್.ಅಶೋಕ್ ಪತ್ರದಲ್ಲಿ ಬರೆದಿದ್ದಾರೆ.







