‘ವಕ್ಫ್ ಬೋರ್ಡ್’ ಆ್ಯಂಬುಲೆನ್ಸ್, ಫ್ರೀಝರ್ ಖರೀದಿಯಲ್ಲಿ ಅವ್ಯವಹಾರವಾಗಿಲ್ಲ : ಕೆ.ಅನ್ವರ್ ಬಾಷಾ

ಕೆ.ಅನ್ವರ್ ಬಾಷಾ
ಬೆಂಗಳೂರು : ರಾಜ್ಯ ವಕ್ಫ್ ಬೋರ್ಡ್ ವತಿಯಿಂದ ಖರೀದಿಸಲಾಗಿರುವ ಆ್ಯಂಬುಲೆನ್ಸ್ ಹಾಗೂ ಫ್ರೀಝರ್ ಖರೀದಿಯಲ್ಲಿ ಯಾವುದೇ ಅವ್ಯವಹಾರವಾಗಿಲ್ಲ. ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ಸೈಯದ್ ಅಶ್ರಫ್ ಮಾಡಿರುವ ಆರೋಪಗಳೆಲ್ಲ ಆಧಾರ ರಹಿತವಾದದ್ದು ಎಂದು ರಾಜ್ಯ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕೆ.ಅನ್ವರ್ ಬಾಷಾ ಸ್ಪಷ್ಟನೆ ನೀಡಿದ್ದಾರೆ.
ಸೋಮವಾರ ನಗರದ ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿರುವ ರಾಜ್ಯ ವಕ್ಫ್ ಬೋರ್ಡ್ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಅವಧಿಯಲ್ಲಿ ನಾನು ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಗ್ರಾಮೀಣ ಭಾಗದಲ್ಲಿನ ಬಡವರಿಗೆ ನೆರವು ಒದಗಿಸಲು, ವಕ್ಫ್ ಸಂಸ್ಥೆಗಳಿಗೆ ಆ್ಯಂಬುಲೆನ್ಸ್ ಹಾಗೂ ಫ್ರೀಝರ್ ನೀಡಲು ನಿರ್ಧರಿಸಲಾಯಿತು ಎಂದು ಹೇಳಿದರು.
ಆ್ಯಂಬುಲೆನ್ಸ್ ಹಾಗೂ ಫ್ರೀಝರ್ಗಳ ಖರೀದಿ ಪ್ರಕ್ರಿಯೆ ವಕ್ಫ್ ಬೋರ್ಡ್ನ ಸಿಇಒ ಸುಪರ್ದಿಯಲ್ಲಿ ನಡೆದಿದೆ. ಅವರೇ ಆ್ಯಂಬುಲೆನ್ಸ್ ಹಾಗೂ ಫ್ರೀಝರ್ಗಳ ಖರೀದಿಗೆ ಟೆಂಡರ್ ಕರೆದು, ಅವುಗಳ ದರಪಟ್ಟಿಯನ್ನು ಪರಿಶೀಲಿಸಿ, ಖರೀದಿಗೆ ಆದೇಶಿಸಿರುವುದು. ಇದರಲ್ಲಿ 3 ಕೋಟಿ ರೂ.ಅವ್ಯವಹಾರು ನಡೆದಿದೆ ಎಂದು ಅವರು ಆರೋಪಿಸಿದ್ದಾರೆ. ಅಲ್ಲದೇ, ಮುಖ್ಯಮಂತ್ರಿಗೆ ಪತ್ರ ಬರೆದು ತನಿಖೆಗೆ ಮನವಿಯನ್ನು ಮಾಡಿರುವುದಾಗಿ ತಿಳಿಸಿದ್ದಾರೆ ಎಂದು ಅವರು ಹೇಳಿದರು.
ಮತ್ತೊಂದು ಅವಧಿಗೆ ನಾನು ವಕ್ಫ್ ಬೋರ್ಡ್ ಅಧ್ಯಕ್ಷನಾಗಬಾರದು ಎಂಬುದು ಅವರ ಉದ್ದೇಶವಾಗಿತ್ತು. ಅವರ ಆಸೆ ಈಡೇರಿದೆ. ಕಾಣದ ಕೈಗಳು ಅವರ ಹಿಂದೆ ಇದ್ದು, ಇದನ್ನೆಲ್ಲ ಮಾಡಿಸುತ್ತಿದ್ದಾರೆ. ಅವರ ಆರೋಪಗಳಿಗೆ ಪ್ರತ್ಯುತ್ತರ ನೀಡದಿದ್ದರೂ ತಪ್ಪಾಗುತ್ತದೆ. ಆದುದರಿಂದಲೇ, ಇಂದು ಮಾಧ್ಯಮಗಳ ಎದುರು ಬಂದು ಈ ಸ್ಪಷ್ಟೀಕರಣ ನೀಡುತ್ತಿದ್ದೇನೆ ಎಂದು ಅವರು ಹೇಳಿದರು.







