ದಲಿತ ಪ್ರಾಧ್ಯಾಪಕರಿಗೆ ತಾರತಮ್ಯ ಆರೋಪ | ಬೆಂವಿವಿ ಕುಲಪತಿಯನ್ನು ಹಿಂತೆಗೆದುಕೊಳ್ಳಲು ಆಗ್ರಹ : ಚಂದ್ರು ಪೆರಿಯಾರ್

ಬೆಂಗಳೂರು : ಯುಜಿಸಿ ಕಾಯ್ದೆಯ ನಿಯಮಾನುಸಾರವಾಗಿ ಭಡ್ತಿಯಲ್ಲಿ ದಲಿತ ಸಮುದಾಯದ ಪ್ರಾಧ್ಯಾಪಕರಿಗೆ ವಂಚನೆಯಾಗುತ್ತಿದ್ದರೂ, ಬೆಂವಿವಿ ಕುಲಪತಿ ಡಾ.ಜಯಕರ ಜಾತಿ ತಾರತಮ್ಯವನ್ನು ನಿರಾಕರಿಸುತ್ತಿರುವುದು ಖಂಡನೀಯ. ಸರಕಾರ ಈ ಕೂಡಲೇ ಅವರನ್ನು ಕುಲಪತಿ ಜವಾಬ್ದಾರಿಯಿಂದ ಹಿಂತೆಗೆದುಕೊಳ್ಳಬೇಕು ಎಂದು ಸ್ನಾತಕೋತ್ತರ ಮತ್ತು ಸಂಶೋಧನ ವಿದ್ಯಾರ್ಥಿಗಳ ಒಕ್ಕೂಟದ ಚಂದ್ರು ಪೆರಿಯಾರ್ ಆಗ್ರಹಿಸಿದ್ದಾರೆ.
ಮಂಗಳವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ನಿಯಮಗಳ ವಿರುದ್ಧವಾಗಿ ದಲಿತ ಸಮುದಾಯದ ಪ್ರತಿಭಾವಂತರನ್ನು ಕೈಬಿಟ್ಟು ಹೊರಗಡೆಯಿಂದ 5 ಮಂದಿ ಮೇಲ್ಜಾತಿ ಜಾತಿಗೆ ಸೇರಿದ ಪ್ರಾಧ್ಯಾಪಕರನ್ನು ವರ್ಗಾವಣೆ ಮಾಡಿಕೊಂಡಿದ್ದಾರೆ. ಬೆಂವಿವಿ ಆರಂಭದಿಂದಲೂ ಒಬ್ಬೇ ಒಬ್ಬ ದಲಿತ ಸಮುದಾಯದ ವ್ಯಕ್ತಿಯೂ ಕುಲಪತಿಯಾಗಿಲ್ಲ. ಇದು ದಲಿತರ ಮೇಲಿನ ಅಸಹನೆಗೆ ಹಿಡಿದ ಕನ್ನಡಿ ಎಂದು ಬೇಸರ ವ್ಯಕ್ತಪಡಿಸಿದರು.
ಕುಲಪತಿ ರಜೆಯಲ್ಲಿರುವಾಗ ಜವಾಬ್ದಾರಿಯನ್ನು ಹಿರಿಯ ಡೀನ್‍ಗೆ ಕೊಡಬೇಕೆನ್ನುವ ನಿಯಮ. ಆದರೆ, ಇಲ್ಲಿ ಇರುವ ಎಲ್ಲ ಹಿರಿಯ ಡೀನ್‍ಗಳು ದಲಿತ ಸಮುದಾಯಕ್ಕೆ ಸೇರಿದ್ದಾರೆನ್ನುವ ಕಾರಣಕ್ಕಾಗಿ ಅವರಿಗೆ ಉಸ್ತುವಾರಿ ನೀಡದೇ, ಕುಲ ಸಚಿವರಿಗೆ ನೀಡಿದ್ದಾರೆ. ಇದು ಕಾನೂನು ಬಾಹಿರವಷ್ಟೇ ಅಲ್ಲದೇ, ಕುಲಪತಿಗೆ ದಲಿತರ ಮೇಲಿರುವ ಅಸಹನೆಯನ್ನು ತೋರಿಸುತ್ತದೆ ಎಂದು ಅವರು ದೂರಿದರು.
ದಲಿತ ವಿತ್ತಾಧಿಕಾರಿಗಳ ಅಧಿಕಾರವನ್ನು ಕಟ್ಟಡ ನವೀಕರಣದ ನೆಪವೊಡ್ಡಿ ಸುಮಾರು ಒಂದು ವರ್ಷಗಳ ಕಾಲ ‘ಒಂದೇ ಸೂರಿನ ತತ್ವ’ ಅನುಸರಿಸಿ ಕುಲಸಚಿವರಿಗೆ ನೀಡಿದ್ದಾರೆ. ದಲಿತ ಅತಿಥಿ ಉಪನ್ಯಾಸಕರನ್ನು ವಿನಾ ಕಾರಣ ಕೆಲಸದಿಂದ ತೆಗೆದು, ವರ್ಷಾನು ಗಟ್ಟಲೆ ಸಂಬಳ ನೀಡದೆ ವಂಚಿಸಲಾಗಿದೆ. ಜೀವನ ಭದ್ರತೆ ಇಲ್ಲದೆ ಕೆಲವರು ಮಾನಸಿಕವಾಗಿ ಕುಗ್ಗಿ ಆಸ್ಪತ್ರೆ ಸೇರಿದ್ದಾರೆ. ಇಷ್ಟೆಲ್ಲ ಆದಮೇಲೆ ಕುಲಪತಿ ಅವರಿಂದ ನ್ಯಾಯ ಸಿಗಲಿದೆ ಎಂದು ಕಾಯುವುದರಲ್ಲಿ ಅರ್ಥವಿಲ್ಲ. ಕುಲಪತಿಯವರು ಸ್ವಯಂ ಪ್ರೇರಿತವಾಗಿ ರಾಜಿನಾಮೆ ನೀಡಬೇಕೆಂದು ಚಂದ್ರು ಪೆರಿಯಾರ್ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರಕಾರಿ ಎಸ್‍ಸಿ-ಎಸ್‍ಟಿ ನೌಕರ ಸಮನ್ವಯ ಸಮಿತಿಯ ಅಧ್ಯಕ್ಷ ಡಿ.ಶಿವಶಂಕರ್ ಮಾತನಾಡಿ, ಎಚ್.ನರಸಿಂಹಯ್ಯ, ಜಿ.ಎಸ್.ಶಿವರುದ್ರಪ್ಪ, ಡಾ.ಸಿದ್ದಲಿಂಗಯ್ಯ, ಪ್ರೊ.ಬರಗೂರು ರಾಮಚಂದ್ರಪ್ಪರಂತಹ ಮಹನೀಯರು ಕೆಲಸ ಮಾಡಿದ ವಿವಿಯಲ್ಲಿ ವೈಜ್ಞಾನಿಕತೆ, ವೈಚಾರಿಕತೆ, ಸಮಾಜಮುಖಿ ಚಿಂತನೆಗಳು ಬಿತ್ತರವಾಗುತ್ತಿದ್ದವು. ಆದರೆ, ಈಗ ಜಾತಿಯತೆ, ಕೋಮುವಾದ ಬಿತ್ತುವ ಸಂಸ್ಥೆಯಾಗಿ ಮಾರ್ಪಾಡಾಗಿದೆ. 67 ಪ್ರಾಧ್ಯಪಕರು ಜಾತಿ ತಾರತಮ್ಯ ಆಗುತ್ತಿದೆ ಎಂದು ಸಹಿ ಮಾಡಿದರು, ಕುಲಪತಿ ಅಸಡ್ಡೆ ತೋರುತ್ತಿರುವುದು ದುರಂತ. ವಿವಿಯ ಅವ್ಯವಸ್ಥೆ ಮತ್ತು ಜಾತಿ ತಾರತಮ್ಯದ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ನಟ ಚೇತನ್ ಅಹಿಂಸಾ, ದಲಿತ ಹಕ್ಕುಗಳ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜಣ್ಣ, ಜ್ಞಾನೇಶ್ವರ್ ಉಪಸ್ಥಿತರಿದ್ದರು.







