‘ಮಾಧ್ಯಮ ಸಂಜೀವಿನಿ ಯೋಜನೆ’ ಎಲ್ಲ ಪತ್ರಕರ್ತರಿಗೆ ವಿಸ್ತರಿಸಿ : ಸಿಎಂಗೆ ಶಿವಾನಂದ ತಗಡೂರು ಪತ್ರ

ಬೆಂಗಳೂರು: ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನಿ ಯೋಜನೆಯಲ್ಲಿನ ಕಠಿಣ ಷರತ್ತುಗಳನ್ನು ಸರಳೀಕರಣ ಮಾಡಿ, ಎಲ್ಲ ಪತ್ರಕರ್ತರಿಗೂ ಯೋಜನೆಯನ್ನು ವಿಸ್ತರಿಸಿ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಮಾಧ್ಯಮ ಮಾನ್ಯತೆ ಪಡೆದ ಪತ್ರಕರ್ತರು ಮತ್ತು ಅವರ ಕುಟುಂಬಕ್ಕೆ ಈ ಯೋಜನೆಯನ್ನು ಸೀಮಿತ ಮಾಡಿರುವುದರಿಂದ ಅನೇಕ ಪತ್ರಕರ್ತರು ಯೋಜನೆಯಿಂದ ವಂಚಿತರಾಗುತ್ತಾರೆ. ಆದ್ದರಿಂದ ವಾರ್ತಾ ಇಲಾಖೆಯಲ್ಲಿ ಮಾಧ್ಯಮ ಪಟ್ಟಿಯಲ್ಲಿರುವ ಪತ್ರಿಕೆಗಳು ಮತ್ತು ಸುದ್ದಿ ಮಾಧ್ಯಮಗಳಲ್ಲಿ ಕೆಲಸ ಮಾಡುವ ಎಲ್ಲ ಪತ್ರಕರ್ತರಿಗೂ ಯೋಜನೆಯನ್ನು ವಿಸ್ತರಿಸಬೇಕು ಎಂದು ತಿಳಿಸಿದ್ದಾರೆ.
ತುಮಕೂರಿನಲ್ಲಿ ನಡೆದ 39ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪತ್ರಕರ್ತರಿಗೆ ಉಚಿತ ಆರೋಗ್ಯ ಯೋಜನೆಯನ್ನು ಜಾರಿಗೆ ತರಬೇಕು ಎನ್ನುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ (ಕೆಯುಡಬ್ಲೂಜೆ) ಹಕ್ಕೊತ್ತಾಯಕ್ಕೆ ಸ್ಪಂಧಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದೇ ವೇದಿಕೆಯಲ್ಲಿ ಯೋಜನೆ ಜಾರಿಗೆ ತರುವುದಾಗಿ ಘೋಷಿಸಿದ್ದು, ಬಜೆಟ್‍ನಲ್ಲಿಯೂ ಪ್ರಕಟಿಸಲಾಗಿದೆ. ಈ ನಿಟ್ಟಿನಲ್ಲಿ ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರ ಪಾತ್ರವೂ ಪ್ರಾಮುಖ್ಯವಾಗಿತ್ತು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.







