ಕಸಾಪ ಅಧಿಕಾರಸ್ಥರ ದುಷ್ಟ ಮನಸ್ಥಿತಿ ವಿರುದ್ಧ ಹೋರಾಡಬೇಕಿದೆ : ಪ್ರೊ.ಎಸ್.ಜಿ.ಸಿದ್ದರಾಮಯ್ಯ

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ತು ಪ್ರಜಾಸತ್ತಾತ್ಮಕ ನೆಲೆಯಲ್ಲಿ ಜನಪರವಾಗಿ ನಡೆದುಕೊಳ್ಳದೆ ಅಧೋಗತಿಗೆ ಇಳಿದಿದೆ. ಅಧಿಕಾರದಲ್ಲಿ ಕೂತಿರುವ ದುಷ್ಟ ಮನಸ್ಥಿತಿಗಳ ವಿರುದ್ಧ ಹೋರಾಡಬೇಕಾದ ಸಂದರ್ಭ ಬಂದಿದೆ ಎಂದು ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದಲ್ಲಿ ಜಾಣಗೆರೆ ಪತ್ರಿಕೆ ಪ್ರಕಾಶನ ವತಿಯಿಂದ ಹಮ್ಮಿಕೊಂಡಿದ್ದ ಜಾಣಗೆರೆ ವೆಂಕಟರಾಮಯ್ಯ ಅವರ `ನುಡಿಗೋಲು-3' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಲಂಕೇಶ್ ಪತ್ರಿಕೆಯಲ್ಲಿಯೇ ಇದ್ದುಕೊಂಡು ಲಂಕೇಶರನ್ನೇ ತಾತ್ವಿಕ ವಿಚಾರಕ್ಕೆ ಪ್ರಶ್ನಿಸಿದ ವ್ಯಕ್ತಿತ್ವ ಜಾಣಗೆರೆಯವರದ್ದು. ಲಂಕೇಶರ ಗರಡಿಯಲ್ಲಿ ಮುಂಚೂಣಿಯಲ್ಲಿದ್ದ ಅನೇಕರು ಇಂದು ಪಥಭ್ರಷ್ಟರಾಗಿದ್ದಾರೆ. ಅಂತಹದರಲ್ಲಿ ಇನ್ನೂ ಅದೇ ನಿಷ್ಠುರತೆಯನ್ನು ಉಳಿಸಿಕೊಂಡಿರುವ ವ್ಯಕ್ತಿಯೆಂದರೆ ಜಾಣಗೆರೆಯವರು ಎಂದರು.
ಪ್ರಸ್ತುತ ಪುಸ್ತಕದಲ್ಲಿ ಪರಿಚಿತರು ಹಾಗೂ ಪ್ರಚಾರಕ್ಕೆ ಒಳಗಾಗದ ಅನೇಕ ಹೋರಾಟಗಾರರ ವ್ಯಕ್ತಿಚಿತ್ರಗಳನ್ನು ಕಟ್ಟಿಕೊಡಲಾಗಿದೆ. ಇದರಿಂದ ಮುಂಬರುವ ಪೀಳಿಗೆಗೆ ಮಾದರಿ ಹೋರಾಟಗಾರರನ್ನು ಪರಿಚಯಿಸಿ ಕೊಡುವ ಕೆಲಸ ಸಾಧ್ಯವಾಗಲಿದೆ ಎಂದು ಸಿದ್ದರಾಮಯ್ಯ ನುಡಿದರು.
ದಸಂಸ ಮಾವಳ್ಳಿ ಶಂಕರ್ ಮಾತನಾಡಿ, ಭಾಷೆ ಅಥವಾ ಯಾವುದೇ ಚಳವಳಿಗಳಿಗೆ ಮಣ್ಣಿನ ಗುಣವಿರುತ್ತದೆ. ನೆಲ, ಜಲ, ಭಾಷೆಗಳ ನಡುವೆ ಸಾವಯವವಾದ ಸಂಬಂಧಗಳಿರುತ್ತವೆ. ಈ ಸಂಬಂಧವನ್ನು ಕಡಿದು ಅದರ ಮೇಲೆ ದಬ್ಬಾಳಿಕೆ ಮಾಡುತ್ತಿರುವ ಆಧುನಿಕ ರಾಕ್ಷಸ ಪ್ರಭುತ್ವವನ್ನು ಮಣಿಸದೆ ಹೋದರೆ ದೇಶವೇ ಸ್ಮಶಾನ ಸದೃಶವಾಗುತ್ತದೆ. ದೇವನಹಳ್ಳಿ ರೈತರು ಭೂಸ್ವಾಧೀನವನ್ನು ಪ್ರತಿಭಟಿಸುವಾಗ ಅವರ ನಿಟ್ಟುಸಿರು ಮಣ್ಣಿನಲ್ಲಿ ಬೆರೆತು ಹೋಗಿತ್ತು. ದೇಶದ ವಿವಿಧ ಭಾಗದ ಚಿಂತಕರು, ಹೋರಾಟಗಾರರು, ಬರಹಗಾರರು ಸೇರಿ ಪ್ರಭುತ್ವವನ್ನೇ ಮಣಿಸಿದ್ದಾರೆ ಎಂದು ಹೇಳಿದರು.
ಪುಸ್ತಕ ಕುರಿತು ಮಾತನಾಡಿದ ವಿಮರ್ಶಕಿ ಡಾ.ಎಂ.ಎಸ್.ಆಶಾದೇವಿ, ಪುಸ್ತಕದಲ್ಲಿ ಕರ್ನಾಟಕದ ಸಾಂಸ್ಕೃತಿಕ ಸವಾಲುಗಳು ಮತ್ತು ಅದನ್ನು ಎದುರಿಸುತ್ತಿರುವ ಆಧುನಿಕರ ನಡುವಿನ ಸಂಘರ್ಷ ತಿಳಿಯುತ್ತದೆ. ಸಮುದಾಯವನ್ನು ಸೌಹಾರ್ದವಾಗಿ, ವಿವೇಕಯುತವಾಗಿ ಮತ್ತು ಆರೋಗ್ಯಯುತವಾಗಿ ಇಡಲಿಕ್ಕೆ ಎಲ್ಲ ವಲಯದವರು ಹೇಗೆ ಬದ್ಧತೆಯಿಂದ ಹೋರಾಡುತ್ತಾರೆ ಎಂಬುದಕ್ಕೆ ನುಡಿಗೋಲು ಸಾಕ್ಷಿಯಂತಿದೆ. ತಾನು ಬದುಕುತ್ತಿರುವ ಪರಿಸರದಲ್ಲಿ ಇರುವ ಕಲ್ಮಶವನ್ನು ಸ್ವಲ್ಪಮಟ್ಟಿಗಾದರೂ ತೆಗೆದು ಹಾಕುವ ಇರಾದೆಯೂ ಯಾರ ವ್ಯಕ್ತಿತ್ವ, ಬರವಣಿಗೆಯಲ್ಲಿ ಇರುವುದಿಲ್ಲವೋ ಅಂಥವರು ಸಮಾಜಕ್ಕೆ ನಿರುಪಯುಕ್ತ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ರೈತ ಸಂಘದ ನಾಯಕಿ ಸುನಂದಾ ಜಯರಾಮ್, ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಡಾ.ಬಿ. ಜಯಪ್ರಕಾಶಗೌಡ ಕೃತಿಕಾರ ಜಾಣಗೆರೆ ವೆಂಕಟರಾಮಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.







