‘ಕೌಟಂಬಿಕ ಹಿಂಸೆ ಮತ್ತು ವೈವಾಹಿಕ ಕ್ರೌರ್ಯ’ ಅಧ್ಯಯನ ವರದಿ ಬಿಡುಗಡೆ

ಬೆಂಗಳೂರು : ಕಾಯ್ದೆಯಲ್ಲಿರುವ ಒಂದು ನಿಬಂಧನೆ ದುರುಪಯೋಗ ಆಗುತ್ತಿದೆ ಎಂದು ಇಡೀ ಕಾಯ್ದೆಯನ್ನು ರದ್ದುಗೊಳಿಸಬಾರದು ಎಂದು ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷ ನ್ಯಾ.ಅಶೋಕ್ ಬಿ. ಹಿಂಚಿಗೇರಿ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ಇಲ್ಲಿನ ಸೇಂಟ್ ಮಾರ್ಕ್ಸ್ ರಸ್ತೆಯಲ್ಲಿರುವ ಆಶೀರ್ವಾದ್ ಕೇಂದ್ರದಲ್ಲಿ ಅವೇಕ್ಷಾ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಕೀಲೆ ಬಿಂದು ಎನ್. ದೊಡ್ಡಹಟ್ಟಿ ಮತ್ತು ಪ್ರಗ್ಯ ಸೋಲಂಕಿ ಅವರ ‘ಕಾನೂನು ಮತ್ತು ಅದರ ಮಿತಿಗಳು: ಕೌಟಂಬಿಕ ಹಿಂಸೆ ಮತ್ತು ವೈವಾಹಿಕ ಕ್ರೌರ್ಯದ ಕುರಿತ ಪ್ರಾಯೋಗಿಕ ಅಧ್ಯಯನ’ ಎಂಬ ವರದಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
ದೇಶದಲ್ಲಿ ವಾಕ್ ಸ್ವಾತಂತ್ರ್ಯವನ್ನು ದಿನವಿಡೀ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಆದರೆ ವಾಕ್ ಸ್ವಾತಂತ್ರ್ಯವನ್ನು ಹಿಂತೆಗೆದುಕೊಳ್ಳಲು ಸಾಧ್ಯವೇ? ಹೀಗಾಗಿ ಕಾಯ್ದೆಯಲ್ಲಿರುವ ಒಂದು ನಿಬಂಧನೆಯು ಸರಿಯಿಲ್ಲ ಎಂಬುದು ಕಾಯ್ದೆಯನ್ನು ರದ್ದಪಡಿಸಲು ಆಧಾರವಾಗಬಾರದು ಎಂದು ಅವರು ತಿಳಿಸಿದರು.
ಕೌಟುಂಬಿಕ ಹಿಂಸಾಚಾರ ಕಾನೂನುಗಳನ್ನು ಕೆಲ ಮಹಿಳೆಯರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಪುರುಷ ಹಕ್ಕುಗಳ ಕಾರ್ಯಕರ್ತರ ಆರೋಪವಾಗಿದೆ. ಈ ನೆಪಗಳು ಅಥವಾ ವಾದಗಳಿಂದಾಗಿ ಕೌಟುಂಬಿಕ ಹಿಂಸಾಚಾರ ಕಾನೂನುಗಳನ್ನು ಹಿಂಪಡೆಯಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.
ಹಾಗೆಯೇ ಶಿಕ್ಷೆಯ ಪ್ರಮಾಣ ಕಡಿಮೆಯಾಗಿದೆ ಎಂದು ಭಾರತೀಯ ನ್ಯಾಯ ಸಂಹಿತೆಯ(ಬಿಎನ್‍ಎಸ್) ಸೆಕ್ಷನ್ 85 ಮತ್ತು 86, ವರದಕ್ಷಿಣೆ ನಿಷೇಧ ಕಾಯ್ದೆ-1961, ಗೃಹ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯ್ದೆ-2005 ಅನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ನಾಗರಿಕ ಸಮಾಜ, ವಸ್ತುನಿಷ್ಠ ಮಾಧ್ಯಮಗಳು, ಬಲವಾದ ನ್ಯಾಯಾಂಗ ವ್ಯವಸ್ಥೆ ಮತ್ತು ನಿಷ್ಠೆಯುಳ್ಳ ವಕೀಲರಿಂದ ಮಾತ್ರ ಕೌಟುಂಬಿಕ ಹಿಂಸಾಚಾರ ಕಾನೂನುಗಳನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಲು ಸಾಧ್ಯ ಎಂದು ಅಶೋಕ್ ಬಿ ಹಿಂಚಿಗೇರಿ ತಿಳಿಸಿದರು.
ವಕೀಲೆ ಬಿಂದು ಎನ್. ದೊಡ್ಡಹಟ್ಟಿ ಮಾತನಾಡಿ, ಕೇಂದ್ರ ಸರಕಾರದ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(ಎನ್‍ಸಿಆರ್‍ಬಿ) ಒಟ್ಟಾರೆ ಅಪರಾಧಗಳ ಬಗ್ಗೆ ಮಾತ್ರ ದಾಖಲಿಸುತ್ತಿದೆ. ಆದರೆ ಭಾರತೀಯ ನ್ಯಾಯ ಸಂಹಿತೆಯ(ಬಿಎನ್‍ಎಸ್) ಸೆಕ್ಷನ್ 85 ಮತ್ತು 86, ವರದಕ್ಷಿಣೆ ನಿಷೇಧ ಕಾಯ್ದೆ-1961, ಗೃಹ ಹಿಂಸಾಚಾರದಿಂದ ಮಹಿಳೆಯರ ರಕ್ಷಣೆ ಕಾಯ್ದೆ-2005 ಅಡಿ ದಾಖಲಾದ ಪ್ರಕರಣಗಳ ಬಗ್ಗೆ ಪ್ರತ್ಯೇಕವಾಗಿ ಮಾಹಿತಿಯನ್ನು ದಾಖಲಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಮಹಿಳಾ ದೌರ್ಜನ್ಯಗಳ ಬಗ್ಗೆ ಪ್ರತ್ಯೇಕವಾಗಿ ಕಾರ್ಯಕ್ರಮಗಳನ್ನು ನಡೆಸಿ, ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಮಹಿಳೆಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಾಂತ್ವಾನ ಕೇಂದ್ರಗಳಿಗೆ ಅನುದಾನವನ್ನು ನೀಡಬೇಕು ಎಂದು ಅವರು ಒತ್ತಾಯಿಸಿದರು. ಕಾರ್ಯಕ್ರಮದಲ್ಲಿ ವಕೀಲರಾದ ಪೂರ್ಣ ರವಿಶಂಕರ್, ಪ್ರಗ್ಯ ಸೋಲಂಕಿ ಸೇರಿದಂತೆ ಮತ್ತಿತರರು ಇದ್ದರು.
ಅಧ್ಯಯನ ವರದಿಯ ಶಿಫಾರಸುಗಳು
1.ಮಹಿಳಾ ದೌರ್ಜನ್ಯ ಪ್ರಕರಣಗಳಲ್ಲಿ ಸೂಕ್ತ ತೀರ್ಪು ನೀಡಲು ಅನುಕೂಲವಾಗುವ ನಿಟ್ಟಿನಲ್ಲಿ ಸರಕಾರವು ನ್ಯಾಯಾಧೀಶರಿಗೆ ತರಬೇತಿಗಳನ್ನು ನೀಡಬೇಕು.
2.ಮಹಿಳಾ ದೌರ್ಜನ್ಯ ಪ್ರಕರಣಗಳಲ್ಲಿ ದೂರು ಬಂದರೆ ಪೊಲೀಸರು ತಕ್ಷಣ ಎಫ್‍ಐಆರ್ ದಾಖಲಿಸಿ ಕ್ರಮ ವಹಿಸಬೇಕು.
3.ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ(ಎನ್‍ಸಿಆರ್‍ಬಿ) ಕೌಟುಂಬಿಕ ಹಿಂಸಾಚಾರ ಪ್ರಕರಣಗಳಲ್ಲಿ ನಿರೀಕ್ಷಣಾ ಜಾಮೀನು ಪಡೆದಿರುವ ಮಾಹಿತಿಯನ್ನು ಪ್ರತ್ಯೇಕವಾಗಿ ದಾಖಲಿಸಬೇಕು.
4.ಕೌಟುಂಬಿಕ ಹಿಂಸಾಚಾರ ಪ್ರಕರಣಗಳಲ್ಲಿ ಜಾತಿ, ಧರ್ಮ, ವರ್ಗ, ಅಂಗವೈಕಲ್ಯ ಮತ್ತು ಹಣಕಾಸಿನ ಹಿಂಸೆಯ ಬಗ್ಗೆ ಮಾಹಿತಿಯನ್ನು ನಮೂದಿಸಬೇಕು.
5.18 ವರ್ಷಕ್ಕಿಂತ ಮೊದಲೇ ವಿವಾಹವಾಗಿರುವ ಬಾಲಕಿಯರು ನೀಡಿದ ದೂರನ್ನು ಪರಿಗಣಿಸಿ, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5ರಲ್ಲಿ ದಾಖಲಿಸಬೇಕು.
6.ವಿವಾಹವಾಗಿ ಏಳು ವರ್ಷಗಳ ನಂತರ ವರದಕ್ಷಿಣೆ ಕಿರುಕುಳ ನೀಡಿದರೆ ದೂರು ದಾಖಲಾಗುವುದಿಲ್ಲ. ಇದು ಅವೈಜ್ಞಾನಿಕವಾಗಿದ್ದು, ವರದಕ್ಷಿಣೆ ಕಿರುಕುಳ ಪ್ರಕರಣದಲ್ಲಿ ಅವಧಿಯ ನಿರ್ಬಂಧವನ್ನು ತೆಗೆಯಬೇಕು.
7.ವರನಿಗೆ ಉಡುಗೊರೆ ನೀಡುವುದನ್ನು ವರದಕ್ಷಿಣೆ ಎಂದು ಪರಿಗಣಿಸಲು ವರದಕ್ಷಿಣೆ ನಿಷೇಧ ಕಾಯ್ದೆ ಯಲ್ಲಿ ಸೇರಿಸಬೇಕು.
8.ಪ್ರತಿ ಜಿಲ್ಲೆಯಲ್ಲೂ ವರದಕ್ಷಿಣೆ ನಿಷೇಧ ಅಧಿಕಾರಿಗಳನ್ನು ನೇಮಕ ಮಾಡಬೇಕು.
9.ಮಹಿಳಾ ಆತ್ಮಹತ್ಯೆ ಪ್ರಕರಣಗಳಲ್ಲಿ ವರದಕ್ಷಿಣೆ ಕಿರುಕುಳ ಸೇರಿದಂತೆ ಕೌಟುಂಬಿಕ ಹಿಂಸಾಚಾರ ಬಗ್ಗೆಯೂ ಮಾಹಿತಿಯನ್ನು ಒದಗಿಸಬೇಕು.







