ನಾನು ಪ್ರತಿದಿನವನ್ನೂ ಶಾಸಕರಿಗೆ ಮೀಸಲಾಗಿಟ್ಟಿದ್ದೇನೆ: ಡಿ.ಕೆ.ಶಿವಕುಮಾರ್

ಬೆಂಗಳೂರು : ನನ್ನನ್ನು ಭೇಟಿ ಮಾಡಲು ಪ್ರತಿದಿನವೂ ಶಾಸಕರು ಬರುತ್ತಿರುತ್ತಾರೆ. ಪ್ರತಿದಿನವನ್ನೂ ನಾನು ಶಾಸಕರಿಗೆ ಮೀಸಲಾಗಿ ಇಟ್ಟಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ರವಿವಾರ ಸದಾಶಿವನಗರದಲ್ಲಿನ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರು ನಗರವನ್ನು ಐದು ವಲಯಗಳಾಗಿ ವಿಂಗಡಣೆ ಮಾಡುವ ಬಗ್ಗೆ ಈಗಾಗಲೇ ವಿಧಾನಸಭೆಯಲ್ಲಿ ಮಾತನಾಡಿದ್ದೇವೆ. ಎಲ್ಲರ ಬಳಿಯೂ ಇದರ ಬಗ್ಗೆ ಮಾತನಾಡಿಯೇ ತೀರ್ಮಾನ ತೆಗೆದುಕೊಂಡಿದ್ದೇವೆ. ಆದರೂ ಬಿಜೆಪಿ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ರಾಜಕೀಯ ಕಾರಣಕ್ಕಾಗಿ ವಿರೋಧ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಬಿಬಿಎಂಪಿ, ವಿದ್ಯುತ್ ಸಂಪರ್ಕ, ‘ಬಿ’ ಖಾತಾ ವಿಚಾರಗಳ ಬಗ್ಗೆ ಒಂದಷ್ಟು ದಾಖಲೆಗಳನ್ನು ಇಟ್ಟುಕೊಂಡು ಮಾತನಾಡುತ್ತೇನೆ. ನಾನು ಯಾವುದಕ್ಕೂ ಉತ್ತರ ನೀಡದೆ ಓಡಿ ಹೋಗುವುದಿಲ್ಲ. ಸಚಿವ ಸಂಪುಟ ಸಭೆಯಲ್ಲಿ ಒಂದಷ್ಟು ತೀರ್ಮಾನ ಮಾಡುತ್ತಿದ್ದೇವೆ. ಎಲ್ಲದಕ್ಕೂ ಉತ್ತರ ನೀಡುತ್ತೇವೆ ಎಂದು ಡಿ.ಕೆ. ಶಿವಕುಮಾರ್ ನುಡಿದರು.
ಧರ್ಮಸ್ಥಳ ಸರಣಿ ಸಾವುಗಳ ಬಗ್ಗೆ ಎಸ್‍ಐಟಿ ರಚನೆ ಮಾಡಿರುವ ಬಗ್ಗೆ ನನಗೆ ಇನ್ನೂ ಸರಿಯಾದ ಮಾಹಿತಿ ಲಭ್ಯವಿಲ್ಲ. ಗೃಹ ಸಚಿವರ ಡಾ.ಜಿ.ಪರಮೇಶ್ವರ್ ಅವರ ಬಳಿ ಇದರ ಬಗ್ಗೆ ಮಾತನಾಡಿ ಮಾಹಿತಿ ಪಡೆಯುತ್ತೇನೆ. ಎಲ್ಲ ವಿಚಾರಗಳಿಗೂ ಬಾಯಿ ಹಾಕುವುದು ಸೂಕ್ತವಲ್ಲ. ಪರಮೇಶ್ವರ್ ನೋಡಿಕೊಳ್ಳುತ್ತಾರೆ ಎಂದರು.







