ಅಧಿಕಾರಿಗಳ ಜಟಾಪಟಿ | ಸಿಎಂರ ವಿಶೇಷ ಕರ್ತವ್ಯಾಧಿಕಾರಿ ವಿರುದ್ಧ ಡಿಸಿಎಂ ವಿಶೇಷ ಕರ್ತವ್ಯಾಧಿಕಾರಿ ದೂರು

ಕರ್ನಾಟಕ ಭವನ | PC : newindianexpress
ಬೆಂಗಳೂರು : ಸಿಎಂ ಮತ್ತು ಡಿಸಿಎಂ ವಿಶೇಷ ಕರ್ತವ್ಯಾಧಿಕಾರಿಗಳ ನಡುವೆ ಜಟಾಪಟಿ ನಡೆದಿದ್ದು, ಈ ಸಂಬಂಧ ಡಿಸಿಎಂ ವಿಶೇಷ ಕರ್ತವ್ಯಾಧಿಕಾರಿ ದೂರು ನೀಡಿರುವುದಾಗಿ ವರದಿಯಾಗಿದೆ.
ಉಪಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಎಚ್.ಆಂಜನೇಯ ಅವರು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಸಹಾಯಕ ನಿವಾಸಿ ಆಯುಕ್ತರು ಮೋಹನ್ ಕುಮಾರ್.ಸಿ. ವಿರುದ್ಧ ಕರ್ನಾಟಕ ಭವನ ನಿವಾಸಿ ಆಯುಕ್ತರಿಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ʼಸಿಎಂರ ವಿಶೇಷ ಕರ್ತವ್ಯಾಧಿಕಾರಿ ಮೋಹನ್ ಕುಮಾರ್ ಅವರು ಬೂಟು ಕಳಚಿಕೊಂಡು ಹೋಡೆಯುತ್ತೇನೆ ಎಂದು ಸಿಬ್ಬಂದಿಗಳ ಎದುರಿಗೆ ತಮ್ಮ ಅಧಿಕಾರ ದರ್ಪ ತೋರಿಸಿ ಹೊಡೆಯಲು ಬಂದಿದ್ದಾರೆʼ ಎಂದು ಆರೋಪಿಸಿ ಡಿಸಿಎಂ ವಿಶೇಷ ಕರ್ತವ್ಯಾಧಿಕಾರಿ ಆಂಜನೇಯ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂಬಂಧ ನಿವಾಸಿ ಆಯುಕ್ತರಿಗೆ ಬರೆದ ಪತ್ರದಲ್ಲಿ ಎಚ್.ಆಂಜನೇಯ ಅವರು, ಮೋಹನ್ ಕುಮಾರ್.ಸಿ. ಸಹಾಯಕ ನಿವಾಸಿ ಆಯುಕ್ತರಾಗಿ ವರದಿ ಮಾಡಿಕೊಂಡ ದಿನಾಂಕದಿಂದ ಈ ದಿನಾಂಕದವರೆವಿಗೂ ನನ್ನ ಕರ್ತವ್ಯಕ್ಕೆ ಅಡ್ಡಿಮಾಡಿಕೊಂಡು ಬಂದಿದ್ದಾರೆ. ಇಂದು ಬೂಟು ಕಳಚಿಕೊಂಡು ಹೋಡೆಯುತ್ತೇನೆ ಎಂದು ಅವರ ಚೇಂಬರ್ನಲ್ಲಿ ಹೇಳಿದ್ದಾರೆ. ಕಚೇರಿಯ ಹೊರ ಅವರಣದಲ್ಲಿ ಎಲ್ಲರ ಎದುರಿಗೆ ಹಾಗೂ ಪ್ರಮೀಳಾ ಇವರ ಸಮ್ಮುಖದಲ್ಲಿ ಹೊಡೆಯಲು ಬಂದಿರುತ್ತಾರೆ. ನಾನು ಒಬ್ಬ ಗ್ರೂಪ್ - ಬಿ ಅಧಿಕಾರಿಯಾಗಿದ್ದು ಹಾಗೂ ಉಪ ಮುಖ್ಯಮಂತ್ರಿಗಳ ವಿಶೇಷ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಾ ಬಂದಿರುತ್ತೇನೆ. ಈ ಹಿನ್ನೆಲೆಯಲ್ಲಿ ನನಗೆ ಏನಾದರೂ ಅಪಘಾತ ಆದರೆ ಮೋಹನ್ ಕುಮಾರ್ ಅವರೇ ಕಾರಣ ಎಂದು ದೂರಿದ್ದಾರೆ ಎನ್ನಲಾಗಿದೆ.







