ಬೆಂಗಳೂರು | ಅಂಗನವಾಡಿಗಳಲ್ಲಿ ಜಾರಿಗೊಳಿಸಿರುವ ಎಫ್‍ಆರ್‌ಎಸ್ ಪದ್ಧತಿ ಕೈಬಿಡುವಂತೆ ಆಗ್ರಹಿಸಿ ಧರಣಿ

ಬೆಂಗಳೂರು : ಅಂಗನವಾಡಿಗಳಲ್ಲಿ ಮಕ್ಕಳು ಹಾಗೂ ಗರ್ಭಿಣಿ, ಬಾಣಂತಿಯರಿಗೆ ಪೌಷ್ಟಿಕ ಆಹಾರ ವಿತರಿಸಲು ಆಧಾರ್ ಲಿಂಕ್ ಆಧಾರಿತ ಅವರ ಮುಖಚಹರೆ ಗುರುತಿಸುವ ಎಫ್‍ಆರ್‌ಎಸ್ ಪದ್ಧತಿ ಕೈ ಬಿಡುವಂತೆ ಆಗ್ರಹಿಸಿ, ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ವತಿಯಿಂದ ನಗರದ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ನಡೆಸಲಾಯಿತು.
ಈ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್‍ನ ರಾಜ್ಯಾಧ್ಯಕ್ಷ ಬಿ.ಅಮ್ಜದ್, ಅಂಗನವಾಡಿ ಕಾರ್ಯಕರ್ತೆಯರನ್ನು ಬಿಎಲ್‍ಒಗಳಾಗಿ ನಿಯೋಜಿಸುವುದನ್ನು ಕೈ ಬಿಡಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ನಿಗದಿತ ಕೆಲಸಗಳೇ ಹೆಚ್ಚು ಇರುವುದರಿಂದ ಮತ್ತಷ್ಟು ಹೆಚ್ಚುವರಿಯಾಗಿ ಬೇರೆ ಬೇರೆ ಇಲಾಖೆಗಳ ಕೆಲಸ ನಿರ್ವಹಿಸುವುದು ಅತ್ಯಂತ ಕಷ್ಟಕರವಾಗಿರುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳು, ಗರ್ಭಿಣಿ, ಬಾಣಂತಿಯರಿಗೆ ಪೌಷ್ಟಿಕ ಆಹಾರ ವಿತರಿಸುವ ಫಲಾನುಭವಿಗಳ ಮುಖಚಹರೆಯನ್ನು ಮೊಬೈಲ್ ಮೂಲಕ ಗುರುತಿಸುವಂತಹ ಎಫ್‍ಆರ್‌ಎಸ್ ಪದ್ಧತಿಯನ್ನು ಜಾರಿಗೊಳಿಸಿರುವುದರಿಂದ ಅಂಗನವಾಡಿ ಕಾರ್ಯಕರ್ತೆಯರು ವಿವಿಧ ರೀತಿಯ ಸಮಸ್ಯೆಗಳು ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಆದುದರಿಂದ ಫಲಾನುಭವಿಗಳ ಮುಖಚಹರೆ ಗುರುತಿಸಿ ಆಹಾರ ವಿತರಣೆ ಮಾಡುವ ಪದ್ಧತಿಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಅಂಗನವಾಡಿಗಳಿಗೆ ಬರುವ ಮಕ್ಕಳು ಅತ್ಯಂತ ಬಡ ಕುಟುಂಬ ಮತ್ತು ಕಾರ್ಮಿಕ ವರ್ಗದಿಂದ ಕೂಡಿದ್ದು, ಅವರು ಹೊರಗಡೆ ಕೆಲಸ ಕಾರ್ಯಗಳಿಗೆ ಹೋದಾಗ ಮೊಬೈಲ್ ಒಟಿಪಿ ಪಡೆಯುವುದು ಕಷ್ಟಕರ. ಬಹುತೇಕ ಫಲಾನುಭವಿಗಳು ಆಧಾರ್ ಲಿಂಕ್ ಹೊಂದಿದ ಮೊಬೈಲ್ ಸಂಖ್ಯೆ ಹೊಂದಿದ್ದಾರೆ. ಜತೆಗೆ ತಾಂತ್ರಿಕ ಸಮಸ್ಯೆಗಳಿಂದ ಫಲಾನುಭವಿಗಳ ದಾಖಲೆಯನ್ನು ಮುಖಚಹರೆ ಗುರುತಿಸಿ ಅಪ್ಲೋಡ್ ಮಾಡಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಿದೆ. ಕೆಲವೊಮ್ಮೆ ಮನೆಗಳಿಗೆ ತೆರಳಿ ಮುಖಚಹರೆ ಗುರುತಿಸುವ ಪ್ರಕ್ರಿಯೆ ನಡೆಸುವಾಗ, ಗಲಾಟೆಗಳು ಕೂಡ ಸಂಭವಿಸುತ್ತಿವೆ ಎಂದು ತಿಳಿಸಿದರು.
ಅಂಗನವಾಡಿ ಕಾರ್ಯಕರ್ತೆಯರಿಗೆ ಸಮಸ್ಯೆಗಳು ಎದುರಾದಾಗ ಅಧಿಕಾರಿಗಳು ಅದಕ್ಕೆ ಪರಿಹಾರ ಸೂಚಿಸದೇ ಎಫ್‍ಆರ್‍ಎಸ್ ಮಾಡದೇ ಇರುವ ಕಾರ್ಯಕರ್ತೆಯರ ಮೇಲೆ ಶಿಸ್ತುಕ್ರಮ ಕೈಗೊಳ್ಳುವ ಅಥವಾ ಗೌರವ ಧನ ಕಡಿತ ನೋಟಿಸ್ ನೀಡುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಆರೋಪಿಸಿದರು.
ಧರಣಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ರಾಜ್ಯ ಪ್ರದಾನ ಕಾರ್ಯದರ್ಶಿಎಂ.ಜಯಮ್ಮ, ಮುಖಂಡರಾದ ಮಹಾದೇವಮ್ಮ, ಅನುಸೂಯ, ಜಿಲ್ಲಾಧ್ಯಕ್ಷರಾದ ವೈ.ಡಿ. ಗಿರಿಜಾ, ಸರೋಜಮ್ಮ, ಜಯಲಕ್ಷ್ಮಿ, ಸುಲೋಚನಾ, ಸುನಂದ, ಭಾಗ್ಯಮ್ಮ ಮತ್ತಿತರರು ಹಾಜರಿದ್ದರು.







