ಕಸಾಪದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ವಿಚಾರ | ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

ಬೆಂಗಳೂರು : ಕನ್ನಡ ಸಾಹಿತ್ಯ ಪರಿಷತ್ (ಕಸಾಪ)ದ 2023-24ನೇ ಸಾಲಿನ ಆದಾಯ, ಅನುದಾನ, ಖರೀದಿ ಮತ್ತು ಮಾರಾಟ ಸೇರಿದಂತೆ ಆರ್ಥಿಕ ವಹಿವಾಟಿನಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ತನಿಖೆ ನಡೆಸುವ ಕುರಿತು ಸಹಕಾರ ಸಂಘಗಳ ಉಪನಿಬಂಧಕರು ತನಿಖಾಧಿಕಾರಿಗಳನ್ನು ನೇಮಿಸಿರುವ ಕ್ರಮವನ್ನು ಹೈಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ಎತ್ತಿ ಹಿಡಿದಿದೆ. ಆದರೆ ತನಿಖಾ ಪ್ರಕ್ರಿಯೆಯು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಿರಲಿದೆ ಎಂದು ತಿಳಿಸಿದೆ.
ಕಸಾಪದ 2023-24ನೇ ಸಾಲಿನ ವಾರ್ಷಿಕ ಸರ್ವಸದಸ್ಯರ ಸಭೆ ರದ್ದುಪಡಿಸಿ ಹಾಗೂ ಪದಾಧಿಕಾರಿಗಳ ಕಾರ್ಯವೈಖರಿ, ಅನುದಾನ ಮತ್ತು ಖರ್ಚು-ವೆಚ್ಚಗಳ ಕುರಿತು ವಿಚಾರಣೆ ನಡೆಸಲು ತನಿಖಾಧಿಕಾರಿ ನೇಮಕ ಮಾಡಿ ಸಹಕಾರ ಸಂಘಗಳ ಉಪನಿಬಂಧಕರು ಹಾಗೂ ಸಂಘಗಳ ನೋಂದಣಾಧಿಕಾರಿ 2ನೇ ವಲಯ ಬೆಂಗಳೂರು ನಗರ ಜಿಲ್ಲಾ ಇವರು 2025ರ ಜೂನ್ 26 ಹಾಗೂ 30ರಂದು ಹೊರಡಿಸಿರುವ ಆದೇಶಗಳನ್ನು ರದ್ದುಪಡಿಸುವಂತೆ ಕೋರಿ ಕಸಾಪ ಅಧ್ಯಕ್ಷ ನಾಡೋಜ ಡಾ. ಮಹೇಶ್ ಜೋಶಿ ಸಲ್ಲಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಸುನೀಲ್ ದತ್ತಯಾದವ್ ಅವರಿದ್ದ ಏಕಸದಸ್ಯ ಪೀಠ ಮಧ್ಯಂತರ ಆದೇಶ ನೀಡಿದೆ.
ಇದೇ ವೇಳೆ ಕಸಾಪದ ಕಾರ್ಯಾಕಾರಿ ಸಮಿತಿಯು ಬಳ್ಳಾರಿಯ ಸಂಡೂರಿನಲ್ಲಿ ಜೂನ್ 29ರಂದು ಕರೆದಿದ್ದ ವಾರ್ಷಿಕ ಸಾಮಾನ್ಯ ಸಭೆಯನ್ನು ರದ್ದು ಪಡಿಸಿ ಜೂನ್ 27ರಂದು ಸಹಕಾರ ಸಂಘ ಉಪ ನಿಬಂಧಕರು ಸಲ್ಲಿಸಿದ್ದ ಆದೇಶವನ್ನು ನ್ಯಾಯಾಲಯ ತಿರಸ್ಕರಿಸಿದೆ. ಸಾಮಾನ್ಯ ವಾರ್ಷಿಕ ಸಭೆಯನ್ನು ಬೆಂಗಳೂರು ಸೇರಿದಂತೆ ರಾಜ್ಯದ ಬೇರೆ ಭಾಗಗಳಲ್ಲಿ ನಡೆಸುವ ತೀರ್ಮಾನ ಕೈಗೊಳ್ಳುವ ಅಧಿಕಾರ ಕಸಾಪ ಕಾರ್ಯಾಕಾರಿಗೆ ಇದೆ ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ಆಗಸ್ಟ್ ಮೊದಲ ವಾರಕ್ಕೆೆ ನ್ಯಾಯಾಲಯ ಮುಂದೂಡಿದೆ.
ಜಾಣಗೆರೆ ವೆಂಕಟರಾಮಯ್ಯ ಹಾಗೂ ಡಾ. ವಸುಂಧರ ಭೂಪತಿ ಸಲ್ಲಿಸಿದ ದೂರಿನ ಹಿನ್ನೆೆಲೆಯಲ್ಲಿ 2025ರ ಜೂನ್ 29ರಂದು ಬಳ್ಳಾರಿ ಜಿಲ್ಲೆೆ ಸಂಡೂರಿನಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದ 2023-24ನೇ ಸಾಲಿನ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ರದ್ದುಪಡಿಸಿ ಜೂನ್ 27ರಂದು ಸಹಕಾರ ಸಂಘಗಳ ಉಪನಿಬಂಧಕರು ಆದೇಶ ಹೊರಡಿಸಿದ್ದರು. ಎನ್. ಹನುಮೇಗೌಡ ಹಾಗೂ ಇತರರು ನೀಡಿದ ದೂರಿನ ಹಿನ್ನೆೆಲೆಯಲ್ಲಿ 2023-24ರಿಂದ ಇಲ್ಲಿವರೆಗೆ ಪರಿಷತ್ತು ಅನುಮೋದಿಸಿರುವ ತಿದ್ದುಪಡಿಗಳು, ಆಡಳಿತ ಮಂಡಳಿ ಪದಾಧಿಕಾರಿಗಳಿಗೆ ಪರಿಷತ್ತಿನ ಅಧ್ಯಕ್ಷರು ನಿಯಮಬಾಹಿರವಾಗಿ ನೀಡಿರುವ ನೋಟಿಸ್ 2023-24ನೇ ಸಾಲಿನಲ್ಲಿ ಪರಿಷತ್ತಿಗೆ ಸಂಗ್ರಹವಾಗಿರುವ ಆದಾಯವನ್ನು ದುರುಪಯೋಗಪಡಿಸಿಕೊಂಡಿರುವುದು, ಈ ಅವಧಿಯಲ್ಲಿನ ಖರೀದಿ ಮತ್ತು ಮಾರಾಟದಲ್ಲಿ ಆಗಿರುವ ಅವ್ಯವಹಾರ ಮತ್ತಿತರ ವಿಷಯಗಳನ್ನು ಪರಿಶೀಲಿಸಿ ಸೂಕ್ತ ವಿಚಾರಣೆ ನಡೆಸಲು ತನಿಖಾಧಿಕಾರಿಯನ್ನು ನೇಮಕ ಮಾಡಿ ಜೂನ್ 30ರಂದು ಹೊರಡಿಸಲಾಗಿತ್ತು. ಈ ಆದೇಶಗಳನ್ನು ರದ್ದುಪಡಿಸಬೇಕು ಎಂದು ಮಹೇಶ್ ಜೋಶಿ ರಿಟ್ ಅರ್ಜಿಯ ಮೂಲಕ ನ್ಯಾಯಾಲಯವನ್ನು ಕೋರಿದ್ದರು.
ಅರ್ಜಿದಾರರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ವಾದ ಮಂಡಿಸಿದರು. ಸರಕಾರದ ಪರವಾಗಿ ಅಡ್ವೋಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ವಾದಿಸಿದ್ದರು.







