ಸೈನಿಕರಿಗಾಗಿ ಕಾನೂನು ಸೇವೆಗಳ ಕ್ಲಿನಿಕ್ ಉದ್ಘಾಟನೆ

ಬೆಂಗಳೂರು : ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಹೊಸ ಯೋಜನೆಯಾದ 'ವೀರ ಪರಿವಾರ ಸಹಾಯತಾ ಯೋಜನೆ-2025 ಹಾಗೂ ಉಚಿತ ಕಾನೂನು ಸೇವೆಗಳ ಕ್ಲಿನಿಕ್' ಅನ್ನು ಸುಪ್ರೀಂಕೋರ್ಟ್ ಹಾಗೂ ದಿಲ್ಲಿಯ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷ ನ್ಯಾ.ಸೂರ್ಯ ಕಾಂತ್ ವರ್ಚುಯಲ್ ಮೂಲಕ ಉದ್ಘಾಟಿಸಿದ್ದಾರೆ.
ಶನಿವಾರ ನಗರದ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ರಾಜ್ಯ ಮಂಡಳಿಯಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ರಾಜ್ಯ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಹಾಗೂ ಬೆಂಗಳೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ ಉದ್ಘಾಟನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ನ್ಯಾ.ಸೂರ್ಯ ಕಾಂತ್ ಮಾತನಾಡಿ, ಜಮ್ಮು ಕಾಶ್ಮೀರದಲ್ಲಿ ಜರುಗಿದ ಪ್ರಾದೇಶಿಕ ಸಮ್ಮೇಳನದ ಅಂಗವಾಗಿ ರಕ್ಷಣಾ ಸಿಬ್ಬಂದಿಗೆ, ಮಾಜಿ ಸೈನಿಕರಿಗೆ ಮತ್ತು ಅವರ ಕುಟುಂಬದವರಿಗೆ ಉಚಿತ ಮತ್ತು ಪರಿಣಾಮಕಾರಿ ಕಾನೂನು ಸೇವೆಯನ್ನು ಒದಗಿಸುವ ಸಲುವಾಗಿ ಈ ಹೊಸ ಯೋಜನೆಯನ್ನು ದೇಶದಾದ್ಯಂತ ಜಾರಿಗೆ ತರಲು ರೂಪಿಸಲಾಗಿದೆ ಎಂದರು.
ಬೆಂಗಳೂರಿನ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ರಾಜ್ಯ ಸೈನಿಕ ಮಂಡಳಿಯಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ವಿಭು ಬಕ್ರು ಸಾಂಕೇತಿಕವಾಗಿ ಉಚಿತ ಕಾನೂನು ಸೇವೆಗಳ ಕ್ಲಿನಿಕ್ ಅನ್ನು ಉದ್ಘಾಟಿಸಿದರು. ರಕ್ಷಣಾ ಸಿಬ್ಬಂದಿ, ಮಾಜಿ ಸೈನಿಕರು ಮತ್ತು ಅವರ ಕುಟುಂಬದ ಸದಸ್ಯರಿಗೆ ಕಾನೂನು ಸೇವೆ ಒದಗಿಸುವುದು ಈ ಕ್ಲಿನಿಕ್‌ನ ಮುಖ್ಯ ಉದ್ದೇಶವಾಗಿದೆ.
ಈ ಸಂದರ್ಭದಲ್ಲಿ ನ್ಯಾಯಮೂರ್ತಿ ಅನು ಶಿವರಾಮನ್, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಶಶಿಧರ ಶೆಟ್ಟಿ, ರಾಜ್ಯ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಪ್ರಭಾರ ನಿರ್ದೇಶಕ ಫೈಟ್ ಲೆಫ್ಟಿನೆಂಟ್ ಎಂ.ಎಸ್. ಲೋಲಾಕ್ಷ ಸೇರಿದಂತೆ ಅಧಿಕಾರಿಗಳು, ಮಾಜಿ ಸೈನಿಕರು ಭಾಗವಹಿಸಿದ್ದರು.







