ಬೆಂಗಳೂರು: 'ವೆಬ್ ಫೋಲ್ಡ್ ಎಕ್ಸ್' ಲೋಕಾರ್ಪಣೆ

ಬೆಂಗಳೂರು: ತಂತ್ರಜ್ಞಾನ ವ್ಯಾಪಿಸುತ್ತಿರುವ ಈ ಪರ್ವಕಾಲದಲ್ಲಿ ಯುವ ಉದ್ಯಮಿಗಳು ಬದಲಾಗುತ್ತಿರುವ ವಾಣಿಜ್ಯ ಜಗತ್ತನ್ನು ಅರ್ಥೈಸಿಕೊಳ್ಳಲು ಇದು ಸೂಕ್ತ ಸಮಯವಾಗಿದೆ. ವಾಣಿಜ್ಯ ಜಗತ್ತು 'ಈ-ಕಾಮರ್ಸ್' ಆಗಿ ಪರಿವರ್ತನೆಗೊಳ್ಳುತ್ತಿದೆ. ಯಶಸ್ಸು ಬಯಸುವ ಯುವಕರು ಬದಲಾಗುತ್ತಿರುವ ವಾಣಿಜ್ಯ ಜಗತ್ತಿಗೆ ಹೊಂದಿಕೊಂಡರೆ ಮಾತ್ರ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯ ಎಂದು ಟೀಕೇಸ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಉಮರ್ ಟೀಕೆ ಅಭಿಪ್ರಾಯಪಟ್ಟರು.
ಅವರು ನೂತನವಾಗಿ ಪ್ರಾರಂಭವಾದ 'ವೆಬ್ ಫೋಲ್ಡ್ ಎಕ್ಸ್' ಎಂಬ ಸಂಸ್ಥೆಯನ್ನು ಬೆಂಗಳೂರಿನ ಬ್ಯಾರೀಸ್ ಸೌಹಾರ್ದ ಭವನದಲ್ಲಿ ಮಂಗಳವಾರ ಲೋಕಾರ್ಪಣೆ ಮಾಡಿ ಅವರು ಮಾತನಾಡುತ್ತಿದ್ದರು.
ಮೊದಲೆಲ್ಲ ಉನ್ನತ ಶಿಕ್ಷಣವನ್ನು ಮುಗಿಸಿ ಕಾಲೇಜಿನಿಂದ ಹೊರಬರುತ್ತಿರುವ ಯುವಕರು ಉದ್ಯೋಗ ಹುಡುಕುತ್ತಿದ್ದರು. ಆದರೆ ಇಂದು ಪದವೀಧರರು ಸ್ವಂತ ಉದ್ದಿಮೆಗಳನ್ನು ಸ್ಥಾಪಿಸುತ್ತಿದ್ದಾರೆ. ಈ ಬಗ್ಗೆ ಅವರಿಗೆ ಬಹಳಷ್ಟು ಉತ್ಸಾಹವಿದ್ದರೂ ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಮುಂದುವರಿದರೆ ಮಾತ್ರ ಯಶಸ್ಸು ಸಾಧಿಸಲು ಆಗುತ್ತದೆ. ವ್ಯಾಪಾರದಲ್ಲಿ ಆಸಕ್ತಿ ಇದ್ದರೆ ಅದರಲ್ಲಿ ಖಂಡಿತ ಯಶಸ್ಸು ಇದೆ. ಅದನ್ನು ಕ್ರಿಯಾತ್ಮಕ ಶೈಲಿಯಲ್ಲಿ ಮಾಡಿ ಗ್ರಾಹಕರನ್ನು ಸೆಳೆಯುವಂತಾಗಬೇಕು. ಇ- ಕಾರ್ಮಸ್ ನಿಂದ ಜಗತ್ತಿನ ಯಾವುದೇ ಮೂಲೆಯಲ್ಲೂ ಮಾರುಕಟ್ಟೆಯನ್ನು ಸೃಷ್ಟಿಸಬಹುದು ಎಂದು ಅವರು ಹೇಳಿದರು.
ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಜಿ.ಎ.ಬಾವಾ ಮಾತನಾಡಿ, ಆನ್ ಲೈನ್ ಉದ್ಯಮ ಈಗ ಯಶಸ್ವಿಯಾಗುತ್ತಿರುವುದನ್ನು ಕಾಣಬಹುದಾಗಿದೆ. ಯುವಕರು ಹೆಚ್ಚು ಹೆಚ್ಚು ಈ ದಿಕ್ಕಿನಲ್ಲಿ ಯೋಚಿಸಬೇಕು ಎಂದು ಹೇಳಿದರು.
ಇನ್ನೋರ್ವ ಅತಿಥಿ ಬೆಂಗಳೂರಿನ ಮಿತ್ರ ಅಕಾಡಮಿಯ ಮುಖ್ಯಸ್ಥ ಇಕ್ಬಾಲ್ ಅಹ್ಮದ್ ನೂತನ ಸಂಸ್ಥೆಗೆ ಶುಭ ಹಾರೈಸಿದರು.
ಮುಹಮ್ಮದ್ ಅಲಿ ಕಮ್ಮರಡಿ ಸ್ವಾಗತಿಸಿದರು. ಮುಹಮ್ಮದ್ ಕುಳಾಯಿ ವಂದಿಸಿದರು.







