ಬೆಂಗಳೂರು | ಭಯೋತ್ಪಾದನಾ ಚಟುವಟಿಕೆಗಳಿಗೆ ಬೆಂಬಲ ಆರೋಪ: ಶಂಕಿತ ಮಹಿಳೆಯ ಬಂಧನ

ಬೆಂಗಳೂರು: ಭಯೋತ್ಪಾದನಾ ಚಟುವಟಿಕೆ ಹಾಗೂ ಭಯೋತ್ಪಾದಕರಿಗೆ ಬೆಂಬಲ ನೀಡಿದ ಆರೋಪದಡಿ ತಲೆಮರೆಸಿಕೊಂಡಿದ್ದ ಶಂಕಿತ ಮಹಿಳೆಯನ್ನು ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಗಳು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಶಮಾ ಪರ್ವೀನ್(30) ಬಂಧಿತ ಮಹಿಳೆ ಎಂದು ಗುರುತಿಸಲಾಗಿದೆ. ಬಂಧಿತ ಮಹಿಳೆಯ ಬಳಿ ಲ್ಯಾಪ್‌ಟಾಪ್, ಮೊಬೈಲ್‌ಫೋನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆಕೆಯನ್ನು ಬೆಂಗಳೂರಿನ ನ್ಯಾಯಾಲಯದ ನ್ಯಾಯಾಧೀಶರ ಎದುರು ಮುಂದೆ ಹಾಜರುಪಡಿಸಿ, ಟ್ರಾನ್ಸಿಟ್ ವಾರಂಟ್ ಪಡೆದ ಬಳಿಕ ಗುಜರಾತ್‌ಗೆ ಕರೆದೊಯ್ಯಲಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಜಾರ್ಖಂಡ್ ಮೂಲದ ಶಮಾ ಪರ್ವೀನ್, ಹೆಬ್ಬಾಳದ ಕಂಪೆನಿಯೊಂದರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ತನ್ನ ಸಹೋದರನ ಜೊತೆಗೆ, ಮೂರು ವರ್ಷಗಳಿಂದಲೂ ಬೆಂಗಳೂರಿನ ಮನೋರಾಯನಪಾಳ್ಯದಲ್ಲಿ ವಾಸವಿದ್ದಳು ಎಂದು ಮೂಲಗಳು ತಿಳಿಸಿವೆ.
ಶಮಾ ಪರ್ವೀನ್ ಸಹ ಪದವೀಧರೆಯಾಗಿದ್ದು, ಭಯೋತ್ಪಾದನಾ ಚಟುವಟಿಕೆಗಳಿಗೆ ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕುತ್ತಿದ್ದಳು. ಯುಎಲ್‌ಎಫ್‌ಎ ಸಂಘಟನೆ ಜತೆಗೆ ಮಹಿಳೆ ಗುರುತಿಸಿಕೊಂಡಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಹಿಂದೆ ಭಾರತೀಯ ಉಪಖಂಡದಲ್ಲಿನ ಅಲ್ ಖೈದಾ ಜೊತೆ ಸಂಪರ್ಕ ಹೊಂದಿರುವ ನಾಲ್ವರು ಶಂಕಿತರನ್ನು ಗುಜರಾತ್ ಎಟಿಎಸ್ ಅಧಿಕಾರಿಗಳು ಬಂಧಿಸಿದ್ದರು. ಹೆಚ್ಚಿನ ತನಿಖೆಯಲ್ಲಿ ಉಗ್ರ ಚಟುವಟಿಕೆಗೆ ಪ್ರೇರಣೆೆ ನೀಡುತ್ತಿದ್ದ ಆರೋಪದಡಿ ಜು.29ರಂದು ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ನಡೆದ ಕಾರ್ಯಾಚರಣೆಯಲ್ಲಿ ಶಮಾ ಪರ್ವೀನ್‌ಳನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಸ್ಥಳೀಯವಾಗಿ ಯಾರಾದರೂ ಶಂಕಿತ ಮಹಿಳೆಯ ಜತೆಗೆ ಗುರುತಿಸಿಕೊಂಡಿದ್ದರೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.







