ಯೋಗೀಶ್ ಗೌಡ ಕೊಲೆ ಪ್ರಕರಣ | ಆರೋಪಿ ಸಾಕ್ಷಿಗಳಿಗೆ ಬೆದರಿಸಿರುವ ಸಿಸಿಟಿವಿ ವೀಡಿಯೊ ನೀಡಲು ಸೂಚನೆ

ಬೆಂಗಳೂರು : ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣದ ಸಾಕ್ಷಿ ಬಸವರಾಜ ಮುತ್ತಗಿಗೆ ಆರೋಪಿ ಅಶ್ವಥ್ ಜೀವ ಬೆದರಿಕೆ ಹಾಕಿರುವ ಸಿಸಿಟಿವಿ ವೀಡಿಯೊ ನೀಡುವಂತೆ ಸಿಟಿ ಸಿವಿಲ್ ಕೋರ್ಟ್ ರಿಜಿಸ್ಟ್ರಾರ್‌ಗೆ ಹೈಕೋರ್ಟ್ ಸೂಚನೆ ನೀಡಿದೆ.
ಆರೋಪಿ ಅಶ್ವಥ್ ಜಾಮೀನು ರದ್ದು ಕೋರಿ ಹೈಕೋರ್ಟ್‌ಗೆ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಂ.ಐ.ಅರುಣ್ ಅವರಿದ್ದ ಏಕಸದಸ್ಯ ಪೀಠ ಮೇಲಿನ ಆದೇಶ ನೀಡಿದೆ. ಇದಕ್ಕೂ ಮುನ್ನ ಸಿಬಿಐ ಪರ ಎಸ್ ಪಿಪಿ ಪ್ರಸನ್ನಕುಮಾರ್ ವಾದ ಮಂಡಿಸಿ, ಬಸವರಾಜ ಮುತ್ತಗಿಗೆ ಅಶ್ವಥ್ ಜೀವ ಬೆದರಿಕೆ ಹಾಕಿದ್ದಾನೆ. ಮತ್ತೊಬ್ಬ ಸಾಕ್ಷಿಗೂ ಕೋರ್ಟ್ ಆವರಣದಲ್ಲೇ ಅಶ್ವಥ್ ಬೆದರಿಕೆ ಹಾಕಿದ್ದಾನೆ. ಸಿವಿಲ್ ಕೋರ್ಟ್‌ನ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಸಿಸಿಟಿವಿ ದೃಶ್ಯ ಒದಗಿಸುವಂತೆ ಎಸ್‌ಪಿಪಿ ಪ್ರಸನ್ನ ಕುಮಾರ್ ಮನವಿ ಮಾಡಿದರು.ಇದನ್ನ ಮಾನ್ಯ ಮಾಡಿದ ಹೈಕೋರ್ಟ್ ಬೆದರಿಕೆ ಸಮಯದ ಸಿಸಿಟಿವಿ ದೃಶ್ಯ ನೀಡುವಂತೆ ಸಿಟಿ ಸಿವಿಲ್ ಕೋರ್ಟ್ ರಿಜಿಸ್ಟ್ರಾರ್ ಗೆ ಸೂಚನೆ ನೀಡಿ ವಿಚಾರಣೆಯನ್ನು ಆ.1 ಕ್ಕೆ ಮುಂದೂಡಿದೆ.





