‘ಒಳ ಮೀಸಲಾತಿ’ಗೆ ಆಗ್ರಹಿಸಿ ನಾಳೆ ಡಿಸಿ ಕಚೇರಿ ಮುಂದೆ ಧರಣಿ: ಎ.ನಾರಾಯಣಸ್ವಾಮಿ

ಬೆಂಗಳೂರು : ರಾಜ್ಯದ 25ಕ್ಕೂ ಹೆಚ್ಚು ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ನಾಳೆ (ಆ.1) ಮಾದಿಗ ಸಮುದಾಯಗಳಿಂದ ಒಳ ಮೀಸಲಾತಿ ಕಲ್ಪಿಸಲು ಆಗ್ರಹಿಸಿ ಧರಣಿ ಸತ್ಯಾಗ್ರಹ ನಡೆಯಲಿದೆ ಎಂದು ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ ತಿಳಿಸಿದ್ದಾರೆ.
ಗುರುವಾರ ನಗರದ ಖಾಸಗಿ ಹೊಟೇಲ್‍ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದಿಗ ಸಮುದಾಯದ ಸಂಘಟನೆಗಳ ಸಭೆ ನಡೆಸಿ ಎಲ್ಲ ಜಿಲ್ಲೆಗಳಲ್ಲಿ ಹೋರಾಟಕ್ಕೆ ಸಿದ್ಧತೆ ನಡೆದಿದೆ. ವಿದ್ಯಾರ್ಥಿಗಳು ಸೇರಿದಂತೆ ಸಮುದಾಯದ ಜನರು ಈ ಹೋರಾಟದಲ್ಲಿ ಭಾಗವಹಿಸಬೇಕು ಎಂದು ಕೋರಿದರು.
ಅಧಿವೇಶನ ಮುಗಿಯುವುದರ ಒಳಗೆ ಪರಿಶಿಷ್ಟರ ಒಳ ಮೀಸಲಾತಿ ಜಾರಿಗೊಳಿಸದೆ ಇದ್ದಲ್ಲಿ ಕಾಂಗ್ರೆಸ್ ಸರಕಾರದ ಮೇಲಿನ ಅನುಮಾನ ದುಪ್ಪಟ್ಟಾಗಲಿದೆ. ಮಾದಿಗ ಸಮುದಾಯದವರನ್ನು ತಾತ್ಸಾರದಿಂದ ನೋಡುವುದು ಸರಿಯಲ್ಲ. ಹೋರಾಟದ ಬಿಸಿ ಕಡಿಮೆ ಮಾಡಲು ಗೊಂದಲದ ಹೇಳಿಕೆಗಳನ್ನು ಕೊಡಲಾಗುತ್ತಿದೆ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
ಸಚಿವರಾದ ಡಾ.ಮಹದೇವಪ್ಪ, ಕೆ.ಎಚ್.ಮುನಿಯಪ್ಪ ಹೋರಾಟ ಅವಶ್ಯಕತೆ ಇಲ್ಲ ಎಂದು ಹೇಳುತ್ತಿದ್ದಾರೆ. ಆದರೆ, ಪರಿಶಿಷ್ಟರ ಒಳ ಮೀಸಲಾತಿ ಸಮಸ್ಯೆ ಪರಿಹಾರಕ್ಕೆ ಮುಂದಾಗಿಲ್ಲ. ನಾಳೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ನಡೆಯುವ ಹೋರಾಟದಲ್ಲಿ ಮಾದಿಗ ಸಮುದಾಯದ ಎಲ್ಲ ಉಪ ಜಾತಿಗಳವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಂತಿಸಿದರು.
ಕೇಂದ್ರದಲ್ಲಿ ನಾನು ಸಚಿವನಾಗಿದ್ದಾಗ ಮೀಸಲಾತಿಯ ಅವಶ್ಯಕತೆ, ಮಾದಿಗ ಸಮುದಾಯಕ್ಕೆ ದಕ್ಷಿಣ ಭಾರತದಲ್ಲಿ ಆದ ಅನ್ಯಾಯದ ಕುರಿತು ತಿಳಿಸಿದ್ದೇನೆ. ರಾಜ್ಯದಲ್ಲಿ ಸಚಿವನಾಗಿದ್ದಾಗ ನ್ಯಾ.ಸದಾಶಿವ ಆಯೋಗಕ್ಕೆ ಹಣ ಕೊಡಿಸುವಲ್ಲಿ ಪ್ರಯತ್ನ ಮಾಡಿದ್ದೇನೆ ಎಂದ ಅವರು, ರಾಜ್ಯ ಸರಕಾರ ಕೂಡಲೆ ಒಳ ಮೀಸಲಾತಿ ಕಲ್ಪಿಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.







