ಕಲಾವಿದರು, ಪತ್ರಕರ್ತರು, ಪ್ರಜೆಗಳು ವಿಪಕ್ಷವಾಗಿ ಕೆಲಸ ಮಾಡಲಿ : ನಟ ಪ್ರಕಾಶ್ ರಾಜ್

ಮೈಸೂರು : ಕಲಾವಿದರು, ಮಾಧ್ಯಮ, ಪತ್ರಕರ್ತರು ಮತ್ತು ಪ್ರಜೆಗಳು ನಿರಂತರವಾದ ವಿರೋಧ ಪಕ್ಷವಾಗಿ ಕೆಲಸ ಮಾಡಬೇಕು ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಹೇಳಿದ್ದಾರೆ.
ನಗರದ ನಟರಾಜ ಸಭಾಭವನದಲ್ಲಿ ಗುರುವಾರ ಬಳ್ಳಾರಿ ಜಿಲ್ಲೆಯ ಸಿರಿಗುಪ್ಪ ತಾಲೂಕಿನ ಅನ್ನಪೂರ್ಣ ಪ್ರಕಾಶನ ವತಿಯಿಂದ ನಡೆದ ಲಂಕೇಶ್ ಮಾಧ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಕಲಾವಿದ, ಮಾಧ್ಯಮ, ಪತ್ರಕರ್ತ, ಪ್ರಜೆಗಳು ನಿರಂತರವಾದ ವಿರೋಧ ಪಕ್ಷವಾಗಿ ಕೆಲಸ ಮಾಡಬೇಕು. ನಾವು ಚಾಟಿಗಳಾಗಿ ಜನಪ್ರತಿನಿಧಿಗಳಿಂದ ಕೆಲಸ ಮಾಡಿಸಬೇಕು. ಆತ್ಮೀಯ ಗೆಳೆಯನೂ ಅಧಿಕಾರದಲ್ಲಿದ್ದರೂ ಜನರ ಪರ ವಿರೋಧ ಪಕ್ಷವಾಗಿ ಕೆಲಸ ಮಾಡಬೇಕು ಎಂದು ಹೇಳಿದರು.
ಕನ್ನಡದ ಮುಂದಿನ ಪೀಳಿಗೆಗೆ ವೈಜ್ಞಾನಿಕ ಅಲೋಚನೆಗಳು, ದೂರ ದೃಷ್ಟಿ ಇಟ್ಟುಕೊಂಡು ನಾಲ್ಕು ದಶಕದ ಹಿಂದೆ ಪತ್ರಿಕೆಯನ್ನು ಆರಂಭಿಸದಿದ್ದರೆ, ಜಾಣ-ಜಾಣೆಯರ ವೇದಿಕೆಯನ್ನು ಕಟ್ಟದಿದ್ದರೆ, ಬಾನು ಮುಷ್ತಾಕ್ ಅವರ ಎದೆಯ ಹಣತೆ ಬೂಕರ್ ಪ್ರಶಸ್ತಿಯಾಗಿ ಬೆಳಗುತ್ತಿರಲಿಲ್ಲ. ಮುಂದಿನ ತಲೆಮಾರಿಗೆ ನೀರುಣಿಸಿದರು. ಜನರಿಗೆ ದನಿಯಾಗಿ, ನಿರ್ಭಿಡೆಯಿಂದ ಆಳುವ ಸರಕಾರವನ್ನು ಅವರಂತೆ ಬೈಯ್ಯುವರು ಇಲ್ಲವಾಗಿದ್ದಾರೆ. ಒಂದೇ ಒಂದು ಮಾಧ್ಯಮ ಇಂದು ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್, ಚಲನಚಿತ್ರ ನಿರ್ದೇಶಕಿ ಕವಿತಾ ಲಂಕೇಶ್ ಮಾತನಾಡಿದರು. ಇದಕ್ಕೂ ಮುನ್ನ ಹಿರಿಯ ಪತ್ರಕರ್ತ ಡಾ.ಎಸ್.ನಾಗಣ್ಣ ಅವರಿಗೆ ‘ಲಂಕೇಶ್ ಮಾಧ್ಯಮ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಅನ್ನಪೂರ್ಣ ಪ್ರಕಾಶಕ ಸಿರಿಗೇರಿ ಯರಿಸ್ವಾಮಿ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಹೆಳವರಹುಂಡಿ ಸಿದ್ದಪ್ಪ, ಮೈಸೂರು ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಅಧ್ಯಕ್ಷ ಕೆ.ಬಿ.ಲಿಂಗರಾಜು, ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ.ಚಂದ್ರಶೇಖರ್ ವೇದಿಕೆಯಲ್ಲಿ ಹಾಜರಿದ್ದರು.
ನಿನ್ನೆ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗಬೇಕಿತ್ತು. ವಿಚಾರಣೆಯಲ್ಲಿ ಸಮಯ ವ್ಯರ್ಥವಾಗುತ್ತೆ ಅಂತ ಅಂಬೇಡ್ಕರ್ ಪುಸ್ತಕ ತೆಗೆದುಕೊಂಡು ಹೋಗಿದ್ದೆ. ನೀವೇನು ಪುಸ್ತಕ ತರುತ್ತಿರಲ್ಲ. ನಿಮ್ಮ ಹೆಂಡ್ತಿ ಏನು ಮಾಡುತ್ತಾರೆ, ಇಷ್ಟೊಂದು ಕೋಪ ಯಾಕೇ ಎಂದೆಲ್ಲ ಕೇಳಿದರು. ನನಗೆ ಗೊತ್ತಿಲ್ಲದೆ ಮೇಷ್ಟ್ರು ಎಂದೆ. ಅಧಿಕಾರಿಗಳು ‘ವಾಟ್’ ಎಂದರು. ನಿಮಗೆ ಅರ್ಥವಾಗಲ್ಲ ಬಿಡಿ ಎಂದೆ. ನನ್ನ ಜಸ್ಟ್ ಅಸ್ಕಿಂಗ್, ಕೋಪ, ಆತಂಕ. ವೇದನೆ ಎಲ್ಲದಕ್ಕೂ ಮೂಲ ಕಾರಣ ಲಂಕೇಶ್ ಮೇಷ್ಟ್ರು.
- ಪ್ರಕಾಶ್ ರಾಜ್,ಬಹುಭಾಷಾ ನಟ.







