ನಾಳೆ ದಲಿತ ಸಮುದಾಯದ ಸಚಿವರು-ಶಾಸಕರ ಸಭೆ

ಬೆಂಗಳೂರು : 'ನಾಯಕತ್ವ ಬದಲಾವಣೆ' ಸಮಯ ಬಂದರೆ ದಲಿತರಿಗೆ ಅಧಿಕಾರ ನೀಡಬೇಕು ಎಂಬ ಸಂದೇಶವನ್ನು ಪಕ್ಷದ ವರಿಷ್ಠರಿಗೆ ರವಾನಿಸಲು ಗೃಹ ಸಚಿವ ಡಾ.ಜಿ.ಪರಮೇಶ್ವರ್ ನಿವಾಸದಲ್ಲಿ ಆ.2ರಂದು ದಲಿತ ಸಮುದಾಯದ ಸಚಿವರು ಹಾಗೂ ಶಾಸಕರ ಮಹತ್ವದ ಸಭೆ ಕರೆಯಲಾಗಿದೆ.
ಸಭೆಯಲ್ಲಿ ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ಅಬಕಾರಿ ಸಚಿವ ಆರ್. ಬಿ.ತಿಮ್ಮಾಪೂರ್, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಸೇರಿದಂತೆ ಪರಿಶಿಷ್ಟ ಸಮುದಾಯದ ಶಾಸಕರು ಪಾಲ್ಗೊಳ್ಳಲಿದ್ದಾರೆ ಎಂದು ಗೊತ್ತಾಗಿದೆ.
ಈ ಮಧ್ಯೆ ಒಳಮೀಸಲಾತಿ ಕಲ್ಪಿಸುವ ಸಂಬಂಧ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಅವರು ನೇತೃತ್ವದ ಏಕಸದಸ್ಯ ಆಯೋಗವೂ ಸಮೀಕ್ಷೆ ಪೂರ್ಣಗೊಳಿಸಿದ್ದು, ಆ.4ಕ್ಕೆ ವರದಿ ನೀಡುವ ಸಾಧ್ಯತೆಗಳಿವೆ. ಆ ಹಿನ್ನೆಲೆಯಲ್ಲಿ ಪರಿಶಿಷ್ಟರ ಒಳಮೀಸಲಾತಿ ಹಂಚಿಕೆ ಕುರಿತ ಗೊಂದಲ ನಿವಾರಣೆ ಸೇರಿದಂತೆ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಮುದಾಯದ ಸಚಿವರು ಹಾಗೂ ಶಾಸಕರು ಸಮಾಲೋಚನೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ಒಳ ಮೀಸಲಾತಿ ಗೊಂದಲ ಸರಿಪಡಿಸುವ ಚರ್ಚೆ ನಿಟ್ಟಿನಲ್ಲಿ ಕರೆಯಲಾಗಿರುವ ಈ ಸಭೆಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ಎಡಗೈ ಮತ್ತು ಬಲಗೈ ಗುಂಪಿನ ಜನಪ್ರತಿನಿಧಿಗಳಿಗೆ ಪಾಲ್ಗೊಳ್ಳಲಿದ್ದಾರೆ. ಆದರೆ, ಈ ಸಭೆಗೆ ಪರಿಶಿಷ್ಟ ಪಂಗಡ(ಎಸ್‌ಟಿ)ದ ಸಚಿವರು ಮತ್ತು ಶಾಸಕರಿಗೆ ಆಹ್ವಾನ ನೀಡಿಲ್ಲ ಎಂದು ತಿಳಿದು ಬಂದಿದೆ.







