ಬೆಂಗಳೂರು | ಸಿಸ್ಟರ್ ವಂದನಾ, ಪ್ರೀತಿ ಅವರ ಬಂಧನ ಖಂಡಿಸಿ ಬೃಹತ್ ಪ್ರತಿಭಟನೆ
ಕೂಡಲೇ ಎಫ್‍ಐಆರ್ ರದ್ದುಗೊಳಿಸಿ : ಡಾ.ಪೀಟರ್ ಮಚಾದೋ ಆಗ್ರಹ

ಬೆಂಗಳೂರು : ಮಾನವ ಕಳ್ಳ ಸಾಗಣೆ ಮತ್ತು ಬಲವಂತದ ಮತಾಂತರದ ಆಧಾರ ರಹಿತ ಆರೋಪದೊಂದಿಗೆ ಸಿಸ್ಟರ್ ವಂದನಾ ಮತ್ತು ಪ್ರೀತಿ ಅವರನ್ನು ಬಂಧಿಸಿರುವುದು ಸಂವಿಧಾನಬಾಹಿರವಾಗಿದ್ದು, ಕೂಡಲೇ ಅವರ ಮೇಲಿನ ಎಫ್‍ಐಆರ್ ಅನ್ನು ರದ್ದುಗೊಳಿಸಿ ಬಿಡುಗಡೆ ಮಾಡಬೇಕು ಎಂದು ಬೆಂಗಳೂರು ಆರ್ಚ್ ಬಿಷಪ್ ಡಾ.ಪೀಟರ್ ಮಚಾದೋ ಆಗ್ರಹಿಸಿದ್ದಾರೆ.
ಶನಿವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ಛತ್ತೀಸ್‍ಗಢದಲ್ಲಿ ಮಾನವ ಕಳ್ಳ ಸಾಗಣೆ ಮತ್ತು ಬಲವಂತದ ಮತಾಂತರ ಆರೋಪದ ಮೇಲೆ ವಂದನಾ ಮತ್ತು ಪ್ರೀತಿ ಅವರ ಬಂಧನವನ್ನು ಖಂಡಿಸಿ, ಬೆಂಗಳೂರು ಧರ್ಮ ಪ್ರಾಂತ್ಯ, ಮಂಡ್ಯ ಧರ್ಮ ಪ್ರಾಂತ್ಯ, ಇಂಡಿಯನ್ ಕ್ರಿಶ್ಚಿಯನ್ ಯೂನಿಟಿ ಫೋರಮ್, ಕೆಪಿಸಿಸಿ ಸಾಮಾಜಿಕ ನ್ಯಾಯ ವಿಭಾಗದ ಸಹಯೋಗದೊಂದಿಗೆ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ಸರಕಾರ ನಮಗೆ ಉಪಕಾರ ಮಾಡುವುದು ಬೇಡ, ನ್ಯಾಯ ಕೊಟ್ಟರೆ ಸಾಕು. ಸಂವಿಧಾನ ನಮಗೆ ಅತಿಮುಖ್ಯ ಅದರ ಪ್ರಕಾರ ನ್ಯಾಯ ಸಿಗಬೇಕು. ಸಂವಿಧಾನದಲ್ಲಿ ನಮಗೆ ಧರ್ಮ ಪ್ರಚಾರದ ಅವಕಾಶವೂ ಇದೆ. ಆದರೆ ನಾವು ಯಾರಿಗೂ ಆಮಿಷ ಹೊಡ್ಡಿ ಮತಾಂತರಕ್ಕೆ ಮುಂದಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ನಾವು ಸಮಾಜದಲ್ಲಿ ಅನೇಕ ಉತ್ತಮ ಕೆಲಸಗಳನ್ನು ಮಾಡಿದರೂ ನಮ್ಮನ್ನು ತಮ್ಮವರು ಎಂದು ಸಮಾಜ ಒಪ್ಪಿಕೊಳ್ಳುತ್ತಿಲ್ಲ. ಬೇರೆ ದೇಶದವರಂತೆಯೇ ಕಾಣಲಾಗುತ್ತಿದೆ. ಕರ್ನಾಟಕದಲ್ಲಿ 30 ಸಾವಿರ ಕ್ರಿಶ್ಚಿಯನ್ ಸಂಸ್ಥೆಗಳಿವೆ. 50 ಲಕ್ಷ ಜನರು ಅವುಗಳ ಉಪಯೋಗ ಪಡೆಯುತ್ತಿದ್ದಾರೆ. ಕ್ರೈಸ್ತರು ಕೇವಲ 2 ಲಕ್ಷ ಜನರು ಮಾತ್ರ ಇದ್ದಾರೆ. 48 ಲಕ್ಷ ಜನರು ಬೇರೆ ಬೇರೆ ಧರ್ಮ, ಜಾತಿಯ ಜನರು ಉಪಯೋಗ ಪಡೆಯುತ್ತಿದ್ದಾರೆ. ಕ್ರೈಸ್ತರ ಮೇಲೆ ಅಷ್ಟು ಭಯವಿದ್ದರೆ ನಿಮ್ಮ ಮಕ್ಕಳನ್ನು ನಮ್ಮ ಶಾಲೆಗೆ ಯಾಕೆ ಕಳುಹಿಸುತ್ತೀರಿ? ಎಂದು ಪ್ರಶ್ನಿಸಿದರು.
ಗ್ಲೋಬಲ್ ಕನ್ಸರ್ನ್ಸ್ ಇಂಡಿಯಾದ ಸಂಸ್ಥಾಪಕ ನಿರ್ದೇಶಕಿ ಬೃಂದಾ ಅಡಿಗ ಮಾತನಾಡಿ, ಛತ್ತೀಸ್‍ಗಢದಲ್ಲಿ ವಂದನಾ ಮತ್ತು ಪ್ರೀತಿ ಅವರಿಗೆ ವ್ಯವಸ್ಥಿತ ಶೋಷಣೆ ನೀಡಲಾಗಿದೆ. ವಂದನಾ ಮತ್ತು ಪ್ರೀತಿ ಅವರ ಮೇಲೆ ಕೇವಲ 4 ಗಂಟೆಯಲ್ಲಿ ಮಾನವ ಕಳ್ಳ ಸಾಗಣೆ ಆರೋಪದಡಿ, ಸುಳ್ಳು ಎಫ್‍ಐಆರ್ ದಾಖಲಿಸಿದ್ದಾರೆ. ನಿಜವಾಗಲೂ ಮಾನವ ಕಳ್ಳ ಸಾಗಣೆ ಮಾಡುವವರ ಮೇಲೆ ನಮ್ಮ ಸರಕಾರ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಂಡ್ಯ ಧರ್ಮಪ್ರಾಂತ್ಯದ ಬಿಷಪ್ ಸೆಬಾಸ್ಟಿಯನ್ ಅಡಯಂತ್ರತ್, ಬೆಂಗಳೂರು ಸಿಆರ್‌ಐ ಅಧ್ಯಕ್ಷ ರಿಜು ಜೋಸ್, ಮಂಡ್ಯ ಡಯಾಸಿಸ್ ಕುಲಪತಿ ಜೋಮೋನ್ ಕೋಲೆಂಚೆರಿ, ಇಂಡಿಯನ್ ಕ್ರಿಶ್ಚಿಯನ್ ಯೂನಿಟಿ ಫೋರಮ್ ಅಧ್ಯಕ್ಷ ಅಂತೋಣಿ ವಿಕ್ರಮ್, ಮನೋಹರ್ ಚಂದ್ರಪ್ರಸಾದ್ ಮತ್ತಿತರರು ಹಾಜರಿದ್ದರು.







