ವೃತ್ತಿಪರ ಕೋರ್ಸ್‍ಗಳ ಸೀಟ್ ಹಂಚಿಕೆ ಫಲಿತಾಂಶ ಪ್ರಕಟ : ಎಚ್.ಪ್ರಸನ್ನ

ಬೆಂಗಳೂರು : ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ಇತರ ವೃತ್ತಿಪರ ಕೋರ್ಸ್‍ಗಳ ಸೀಟ್ ಹಂಚಿಕೆಯ ಅಂತಿಮ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶನಿವಾರ ಪ್ರಕಟಿಸಿದ್ದು, ಕಾಲೇಜು ಪ್ರವೇಶ ಪ್ರಕ್ರಿಯೆಯನ್ನೂ ಆರಂಭಿಸಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಇದೇ ಮೊದಲ ಬಾರಿಗೆ ಒಂದೊಂದು ಕೋರ್ಸ್‍ಗೂ ಪ್ರತೇಕವಾದ ಪ್ರವೇಶ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಆ ಪ್ರಕಾರ ಪ್ರಕ್ರಿಯೆಯನ್ನು ಪೂರ್ಣ ಗೊಳಿಸಿ ಕಾಲೇಜುಗಳಿಗೆ ಪ್ರವೇಶ ಪಡೆಯಬೇಕು. ಇಂಜಿನಿಯರಿಂಗ್ ಕೋರ್ಸ್‍ಗಳ ಪ್ರವೇಶಕ್ಕೆ ಛಾಯ್ಸ್‍ಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಶನಿವಾರದಿಂದಲೇ ಆರಂಭವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಛಾಯ್ಸ್-1 ಆಯ್ಕೆ ಮಾಡಿದ ಅಭ್ಯರ್ಥಿಗಳು ಶುಲ್ಕ ಪಾವತಿ, ನಂತರ ಸೀಟ್ ಖಾತ್ರಿ ಚೀಟಿ ಡೌನ್‍ಲೋಡ್ ಮಾಡಲು ಆ. 2ರಿಂದ 8ರವರೆಗೆ ಅವಕಾಶ ನೀಡಲಾಗಿದೆ. ಕಾಲೇಜಿಗೆ ವರದಿ ಮಾಡಿಕೊಳ್ಳಲು ಆ.9 ಕೊನೆಯ ದಿನವಾಗಿದೆ ಎಂದು ತಿಳಿಸಿದ್ದಾರೆ.
ಕೃಷಿ ವಿಜ್ಞಾನ, ಪಶುವೈದ್ಯಕೀಯ, ಬಿ-ಫಾರ್ಮಾ, ಫಾರ್ಮಾ-ಡಿ ಕೋರ್ಸ್‍ಗಳ ಪ್ರವೇಶಕ್ಕೆ ಛಾಯ್ಸ್ ಗಳನ್ನು ಆಯ್ಕೆ ಮಾಡಲು ಆ. 4ರಿಂದ ಅವಕಾಶ ನೀಡಲಾಗಿದೆ. ಛಾಯ್ಸ್-1 ಆಯ್ಕೆ ಮಾಡಿದವರು ಆ.4ರಿಂದ 8ರವರೆಗೆ ಶುಲ್ಕ ಪಾವತಿಸಿ, ಆ.9ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಯೋಗ ಮತ್ತು ನ್ಯಾಚುರೋಪತಿ, ಬಿಪಿಟಿ, ಬಿಪಿಒ, ಅಲೈಡ್ ಹೆಲ್ತ್ ಸೈನ್ಸ್, ಆರ್ಕಿಟೆಕ್ಚರ್ ಕೋರ್ಸ್ ಅಭ್ಯರ್ಥಿಗಳು ಆ.5ರಿಂದ ಛಾಯ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಛಾಯ್ಸ್-1 ಆಯ್ಕೆ ಮಾಡಿದವರು ಆ.11ರೊಳಗೆ ಶುಲ್ಕ ಪಾವತಿಸಬೇಕು. ಆ. 12ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು. ಬಿಎಸ್‍ಸಿ ನರ್ಸಿಂಗ್ ಕೋರ್ಸ್‍ಗೆ ಸೀಟ್ ಹಂಚಿಕೆಯಾಗಿರುವ ಅಭ್ಯರ್ಥಿಗಳು ಆ.6ರಿಂದ ಛಾಯ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಛಾಯ್ಸ್- 1 ಆಯ್ಕೆ ಮಾಡಿದವರು, ಆ.11ರೊಳಗೆ ಶುಲ್ಕ ಪಾವತಿಸಿ, ಆ.12ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಹೋಮಿಯೋಪಥಿ ಕೋರ್ಸ್‍ಗಳಿಗೆ ಸೀಟು ಹಂಚಿಕೆಯಾಗಿರುವವರು ಆ.7ರಿಂದ ಛಾಯ್ಸ್ ಗಳನ್ನು ಆಯ್ಕೆ ಮಾಡಬಹುದು. ಅವರು ಆ.11ರೊಳಗೆ ಶುಲ್ಕ ಪಾವತಿಸಿ, ಆ.12ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು. ಎಂಸಿಸಿ ಸೀಟ್ ಹಂಚಿಕೆ ಫಲಿತಾಂಶವನ್ನು ಆ.6ರಂದು ಪ್ರಕಟಿಸಲಿದ್ದು, ಅದರ ನಂತರವೇ ರಾಜ್ಯದಲ್ಲಿ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದೆ ಎಂದು ಎಚ್.ಪ್ರಸನ್ನ ಮಾಹಿತಿ ನೀಡಿದ್ದಾರೆ.







