ಸಾರಿಗೆ ನೌಕರರ ಸಂಘಟನೆಗಳ ಮುಷ್ಕರ : ಸಿಎಂ ಸಂಧಾನ ಸಭೆ ವಿಫಲ

ಬೆಂಗಳೂರು: ಸಾರಿಗೆ ನೌಕರರ ಒಕ್ಕೂಟದ ಮುಖಂಡರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು(ಆ.4) ನಡೆಸಿದ ಮಾತುಕತೆ ವಿಫಲವಾಗಿದೆ.
ಸಾರಿಗೆ ನೌಕರರ 38 ತಿಂಗಳ ವೇತನ ಬಾಕಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಸಾರಿಗೆ ನೌಕರರ ಸಂಘಟನೆಗಳು ಆ.5ಕ್ಕೆ ಮುಷ್ಕರಕ್ಕೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ, ಈ ಕುರಿತು ಚರ್ಚಿಸಲು ಇಂದು(ಆ.4) ಮುಖ್ಯಮಂತ್ರಿ ಸಿದ್ದರಾಮಯ್ಯರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿತ್ತು.
ವೇತನ ಪರಿಷ್ಕರಣೆಯನ್ನು 2024ರ ಜನವರಿ ಒಂದಕ್ಕೆ ಅನ್ವಯವಾಗುವಂತೆ ನಡೆಸಬೇಕು. ಹಿಂದಿನ ಪರಿಷ್ಕರಣೆಯ ನಂತರದ 38 ತಿಂಗಳ ಹೆಚ್ಚುವರಿ ವೇತನ ಬಾಕಿ ನೀಡಬೇಕು. ಎರಡು ಪ್ರಮುಖ ಬೇಡಿಕೆಗಳಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಸಂಘಟನೆಗಳ ಒಕ್ಕೂಟದ ಮುಖಂಡರು ಪಟ್ಟು ಹಿಡಿದರು.
ಸಭೆಯ ನಂತರ ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಕೆಎಸ್‌ಆರ್‌ಟಿಸಿ ಸ್ಟಾಫ್ ವರ್ಕರ್ಸ್ ಫೆಡರೇಷನ್ ಅಧ್ಯಕ್ಷ ಎಚ್.ವಿ. ಅನಂತಸುಬ್ಬರಾವ್, ‘ವೇತನ ಪರಿಷ್ಕರಣೆಯ ಬಗ್ಗೆ ಮುಖ್ಯಮಂತ್ರಿ ಒಲವು ತೋರಲಿಲ್ಲ. ಹಿಂದಿನ ಪರಿಷ್ಕರಣೆಯ ಬಾಕಿಯಲ್ಲಿ 14 ತಿಂಗಳ ಮೊತ್ತವಷ್ಟೇ ನೀಡುವುದಾಗಿ ಒಪ್ಪಿಗೆ ನೀಡಿದರು. ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಒಪ್ಪದ ಕಾರಣ ಮುಷ್ಕರ ನಡೆಸುವ ನಮ್ಮ ನಿಲುವನ್ನು ಮುಖ್ಯಮಂತ್ರಿಗೆ ಸ್ಪಷ್ಟಪಡಿಸಿದ್ದೇವೆ’ ಎಂದರು.





