ಶಿಕ್ಷಕರ ‘ಬೆಂಗಳೂರು ಚಲೋ’ ಕೈಬಿಡುವಂತೆ ಕ್ರಮ ವಹಿಸಲು ಪ್ರೊ.ನಿರಂಜನಾರಾಧ್ಯ ಒತ್ತಾಯ

ನಿರಂಜನಾರಾಧ್ಯ ವಿ.ಪಿ.
ಬೆಂಗಳೂರು : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಆ.12ರಂದು ಆಯೋಜಿಸಿರುವ ‘ಬೆಂಗಳೂರು ಚಲೋ’ ಕಾರ್ಯಕ್ರಮವನ್ನು ಮಕ್ಕಳ ಕಲಿಕಾ ದೃಷ್ಟಿಯಿಂದ ಕೈಬಿಡಲು ಅನುವಾಗುವಂತೆ ಕ್ರಮ ವಹಿಸಬೇಕು ಎಂದು ಶಿಕ್ಷಣ ತಜ್ಞ ಪ್ರೊ.ನಿರಂಜನಾರಾಧ್ಯ ವಿ.ಪಿ. ಒತ್ತಾಯಿಸಿದ್ದಾರೆ.
ಶುಕ್ರವಾರ ಶಾಲಾ ಶಿಕ್ಷಣ ಹಾಗು ಸಾಕ್ಷರತಾ ಸಚಿವ ಮಧು ಬಂಗಾರಪ್ಪರಿಗೆ ಪತ್ರವನ್ನು ಬರೆದಿದ್ದು, ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಮಕ್ಕಳ ಕಲಿಕೆ ಮತ್ತು ಶಿಕ್ಷಣ ಮೊದಲ ಆದ್ಯತೆಯಾಗಿದ್ದು, ಮಕ್ಕಳ ಕಲಿಕೆಯ ಹಿತದೃಷ್ಟಿಯಿಂದ ಶಾಲಾ ಶಿಕ್ಷಕರ ಸಂಘ ಈ ಹೋರಾಟವನ್ನು ಕೈಬಿಡುವಂತೆ ಅವರ ಜೊತೆ ಸೌಹಾರ್ದಯುತ ಮಾತುಕತೆಯ ಮೂಲಕ ಅವರ ಬೇಡಿಕೆಗಳನ್ನು ಈಡೇರಿಸಿಕೊಡಲು ಅಗತ್ಯ ಕ್ರಮವಹಿಸಬೇಕಾಗಿದೆ ಎಂದಿದ್ದಾರೆ.
ಈಗಾಗಲೇ ಕಳೆದ ಎರಡು ತಿಂಗಳಿಂದ ಸತತ ಮಳೆಯಿಂದಾಗಿ ಅನೇಕ ಜಿಲ್ಲೆಗಳಲ್ಲಿ ಮೇಲಿಂದ ಮೇಲೆ ರಜೆ ಘೋಷಿಸಿದ ಕಾರಣ ಮಕ್ಕಳ ಕಲಿಕೆಯಲ್ಲಿ ತೀವ್ರ ವ್ಯತ್ಯಯವಾಗಿದೆ. ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಜೊತೆಗೆ ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಈ ರೀತಿಯ ಹೋರಾಟ ನೇರವಾಗಿ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಸುಮಾರು 6523 ಕಿರಿಯ ಮತ್ತು ಹಿರಿಯ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದು, ಈ ಬಗೆಯ ಹೋರಾಟಗಳಿಂದ ಅಂತಹ ಶಾಲೆಗಳು ಪೂರ್ಣವಾಗಿ ಮುಚ್ಚುವಂತಾಗಿ, ಮಕ್ಕಳು ಬೀದಿ ಪಾಲಾಗುವ ಸಾಧ್ಯತೆಯಿದೆ. ಕಲಿಕೆಯ ಜೊತೆಗೆ ಮಕ್ಕಳಿಗೆ ಸಿಗಬೇಕಾದ ಹಾಲು, ಮೊಟ್ಟೆ ಮತ್ತು ಬಿಸಿಯೂಟವೂ ಅಂದು ಕೈ ತಪ್ಪುವ ಸಾಧ್ಯತೆ ಇದೆ ಎಂದು ಅವರು ಹೇಳಿದ್ದಾರೆ.
ಶಿಕ್ಷಕರ ಬೇಡಿಕೆಗಳನ್ನು ಪರಿಶೀಲಿಸಿ ನೋಡಿದಾಗ ಕನಿಷ್ಟ ಎರಡು ಬೇಡಿಕೆಗಳು ಅತ್ಯಂತ ನ್ಯಾಯಯುತವಾಗಿವೆ. ಅವರು ಶಿಕ್ಷಕರಾಗಿ ನೇಮಕವಾದ ಸಂದರ್ಭಲ್ಲಿ ಅವರನ್ನು 1 ರಿಂದ 7 ನೇ ತರಗತಿಯವರೆಗೆ ಪ್ರಾಥಮಿಕ ಶಾಲಾ ಶಿಕ್ಷಕರೆಂದು ನೇಮಿಸಿ ನೇಮಕಾತಿ ಆದೇಶ ನೀಡಲಾಗಿದೆ. ಆದೇಶದಂತೆ ಅವರು ನಿವೃತ್ತಿಯಾಗುವವರೆಗೆ 1 ರಿಂದ 7 ನೇತರಗತಿಗೆ ಕಲಿಸಲು ಅವಕಾಶ ನೀಡುವುದು ನ್ಯಾಯ ಸಮ್ಮತವಾಗಿರುತ್ತದೆ ಎಂದಿದ್ದಾರೆ.
ಶಿಕ್ಷಕರ ಹುದ್ದೆಗೆ ಸೇರಿದ ನಂತರ ತಮ್ಮ ವೃತ್ತಿನೈಪುಣ್ಯತೆ ಭಾಗವಾಗಿ ಉನ್ನತ ವಿದ್ಯಾಭ್ಯಾಸ ಪಡೆದಿದ್ದಾರೆ. ಅಂತಹ ಶಿಕ್ಷಕರಿಗೆ ಸ್ವಾಭಾವಿಕವಾಗಿ ಮತ್ತು ನ್ಯಾಯಯುತವಾಗಿ ಜಿಪಿಟಿ ಶಿಕ್ಷಕರ ಹುದ್ದೆಗೆ ಮುಂಬಡ್ತಿ ನೀಡಿ, ಶಿಕ್ಷಕ ವೃತ್ತಿಯನ್ನು ಪ್ರೋತ್ಸಾಹಿಸಬೇಕು. ಇದರಿಂದ ಶಿಕ್ಷಕರ ಆಸಕ್ತಿ, ವೃತ್ತಿ ಬದ್ಧತೆಯನ್ನು ಇಮ್ಮಡಿಯಗುತ್ತದೆ. ಇದು ಮಕ್ಕಳ ಕಲಿಕೆಯ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.







