ಕಾಂಗ್ರೆಸ್ ಕಚೇರಿಯಲ್ಲಿ ಅಕಾಡೆಮಿ, ಪ್ರಾಧಿಕಾರಗಳ ಅಧ್ಯಕ್ಷರ ಸಭೆ ನಡೆಸಿರುವುದು ವಿಷಾದನೀಯ : ನಿರಂಜನಾರಾಧ್ಯ.ವಿ.ಪಿ
ನಿರಂಜನಾರಾಧ್ಯ.ವಿ.ಪಿ
ಬೆಂಗಳೂರು : ಕೆಪಿಸಿಸಿ ಅಧ್ಯಕ್ಷರು ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಭಾಷೆಗೆ ಸಂಬಂಧಿಸಿದ ವಿವಿಧ ಅಕಾಡೆಮಿ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರನ್ನು ಕಾಂಗ್ರೆಸ್ ಪಕ್ಷದ ಕಚೇರಿಗೆ ಕರೆದು ಸಭೆ ನಡೆಸಿದ್ದು ಅತ್ಯಂತ ವಿಷಾದನೀಯ ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ನಿರಂಜನಾರಾಧ್ಯ.ವಿ.ಪಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟನೆ ನೀಡಿದ ಅವರು, ಸಾಂಸ್ಕೃತಿಕ ಅಕಾಡೆಮಿ ಮತ್ತು ಪ್ರಾಧಿಕಾರಗಳು ಉಳಿದ ಬೋರ್ಡ್ ಮತ್ತು ಪ್ರಾಧಿಕಾರಗಳಂತಲ್ಲ. ಸಾಹಿತ್ಯ, ಕಲೆ, ಸಂಸ್ಕೃತಿಗೆ ಸಂಬಂಧಿಸಿದ ಈ ಅಕಾಡೆಮಿ, ಪ್ರಾಧಿಕಾರಗಳು ವಿಷಯ ತಜ್ಞರ ತಜ್ಞತೆಯ ನೆಲೆಯಲ್ಲಿ ಕಾರ್ಯನಿರ್ವಹಿಸುವ ಸ್ವಾಯತ್ತ ಸಂಸ್ಥೆಗಳು. ಇವುಗಳಿಗೆ ಸರಕಾರವೇ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸಿದರೂ, ಅದು ತಜ್ಞತೆಯ ಮತ್ತು ಆ ಕ್ಷೇತ್ರದಲ್ಲಿ ಅವರ ಸಾಧನೆಯನ್ನು ಮಾನದಂಡವಾಗಿ ಇಟ್ಟುಕೊಂಡು ನೇಮಕವಾಗಿರುತ್ತದೆಯೇ ಹೊರತು ರಾಜಕೀಯ ಅಥವಾ ಪಕ್ಷ ರಾಜಕಾರಣ ಮಾನದಂಡವಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಅಂತಹ ತಜ್ಞರನ್ನು ನೇಮಿಸುವುದು ವ್ಯಕ್ತಿಯ ಘನತೆಗಿಂತ ಸರಕಾರ ಹಾಗೂ ಸಂಸ್ಥೆಯ ಘನತೆಯನ್ನು ಹೆಚ್ಚಿಸುತ್ತದೆ. ನೇಮಕವಾಗುವ ಅಧ್ಯಕ್ಷರು ಮತ್ತು ಸದಸ್ಯರು ತಾವು ನೇಮಕವಾದ ಸಂಸ್ಥೆಯನ್ನು ಪ್ರತಿನಿಧಿಸುತ್ತಾರೆಯೇ ಹೊರತು ರಾಜಕೀಯ ಪಕ್ಷವನ್ನಲ್ಲ. ಪಕ್ಷದ ಕಚೇರಿಯಲ್ಲಿ ಆಯೋಜಿಸಿದ ಈ ಸಭೆಗೆ ಅಧ್ಯಕ್ಷರು ಹಾಗೂ ಸದಸ್ಯರು ಯಾಕೆ ಭಾಗವಹಿಸಿದರು ಎಂದು ಪ್ರಶ್ನಿಸಿದ್ದಾರೆ.
ಪ್ರಜಾಸತ್ತಾತ್ಮಕ ಜಾತ್ಯತೀತ ಮೌಲ್ಯಗಳ ನೆಲೆಯಲ್ಲಿ ಸಮಸಮಾಜದ ನಿರ್ಮಾಣಕ್ಕಾಗಿ ಸಂವಿಧಾನಬದ್ಧ ರಾಜಕಾರಣದಲ್ಲಿ ತೊಡಗಿರುವ ಲಕ್ಷಾಂತರ ಬರಹಗಾರರು, ಸಾಹಿತಿಗಳು ಮತ್ತು ಪ್ರಗತಿಪರರ ಬಗ್ಗೆ ಒಂದು ಕೆಟ್ಟ ಸಂದೇಶವನ್ನು ಕಳಿಸುವ ಮೂಲಕ ಅವರನ್ನು ಕುಬ್ಜರನ್ನಾಗಿಸುತ್ತದೆ. ಈಗಾಗಲೇ ಈ ಸಂಸ್ಥೆಗಳನ್ನು ಗಂಜಿ ಕೇಂದ್ರಗಳು ಕರೆದು ಅವುಗಳ ಘನತೆಗೆ ಕುಂದುಂಟಾಗಿದೆ. ಹೀಗಿರುವಾಗ, ಅದಕ್ಕೆ ಇಂಬು ಕೊಡುವ ರೀತಿಯಲ್ಲಿ ಈ ಬೆಳವಣಿಗೆ ನಡೆದದ್ದು ಕನ್ನಡ ಸಾರಸ್ವತ ಲೋಕ ತಲೆ ತಗ್ಗಿಸುವಂತೆ ಮಾಡಿದೆ ಎಂದು ಹೇಳಿದ್ದಾರೆ.
ಉಪಮುಖ್ಯಮಂತ್ರಿಗಳು ಅವರ ಜೊತೆ ಔಪಚಾರಿಕವಾಗಿ ಮಾತನಾಡಿ ಅಭಿನಂದಿಸುವ ಆಶಯ ಹೊಂದಿದ್ದರೆ, ಅವರನ್ನೆಲ್ಲ ವಿಧಾನಸೌಧದಲ್ಲಿಯೇ ಸಭೆ ಕರೆಯಬಹುದಿತ್ತು. ಬದಲಿಗೆ ಅವರನ್ನು ಪಕ್ಷದ ಕಚೇರಿಗೆ ಕರೆದದ್ದು ಅಕಾಡೆಮಿ ಮತ್ತು ಪ್ರಾಧಿಕಾರಗಳಂತ ಸ್ವಾಯತ್ತ ಸಂಸ್ಥೆಗಳ ಘನತೆಯನ್ನು ಕುಗ್ಗಿಸಿದೆ. ಇದೇ ಸಂದರ್ಭದಲ್ಲಿ ಅಲ್ಲಿ ಭಾಗವಹಿಸಿದ ಅಧ್ಯಕ್ಷರು ಸದಸ್ಯರು ಪಕ್ಷ ರಾಜಕಾರಣಕ್ಕೆ ಹೊರತಾಗಿ ತಮ್ಮ ಜವಾಬ್ದಾರಿ ಹಾಗೂ ಘನತೆಯನ್ನು ಎತ್ತಿ ಹಿಡಿಯುವಲ್ಲಿ ಪ್ರಮಾದ ವೆಸಗಿದ್ದಾರೆ ನಿರಂಜನಾರಾಧ್ಯ ವಿ.ಪಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.