ಪ್ರಧಾನಿ ಕಾರ್ಯಕ್ರಮದಲ್ಲಿ ಕೃಷ್ಣ ಬೈರೇಗೌಡರ ಭಾಷಣಕ್ಕಿಲ್ಲ ಅವಕಾಶ: ರಾಜ್ಯಕ್ಕೆ ನ್ಯಾಯ ಕೇಳಿದ್ದಕ್ಕೆ ಸಿಕ್ಕ ಬಹುಮಾನ ಎಂದ ಸಚಿವರು

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ
''ನೀವು ನನ್ನ ಮಾತನ್ನು ಕಟ್ ಮಾಡಬಹುದು. ಆದರೆ ಬೆಂಗಳೂರಿನ ಅಭಿವೃದ್ಧಿಗೆ ಕೆಲಸ ಮಾಡೋದನ್ನ ನಿಲ್ಲಿಸಲಿಕ್ಕೆ ಆಗೋದಿಲ್ಲ''
ಬೆಂಗಳೂರು: ನಗರಕ್ಕೆ ನ.13ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಮಿಸಲಿದ್ದು, ಈ ವೇಳೆ ನಡೆಯುವ ಮೆಟ್ರೋ ಉದ್ಘಾಟನೆ ಕಾರ್ಯಕ್ರಮದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರಿಗೆ ಮಾತನಾಡಲು ಸಮಾಯವಕಾಶ ಕಲ್ಪಿಸಿಲ್ಲ. ಇದು ತಾನು ಕರ್ನಾಟಕ ರಾಜ್ಯಕ್ಕೆ ನ್ಯಾಯ ಕೇಳಿದ್ದಕ್ಕೆ ಸಿಕ್ಕ ಬಹುಮಾನ ಎಂದು ಸಚಿವರು ಟೀಕಿಸಿದ್ದಾರೆ.
ಈ ಬಗ್ಗೆ ತನ್ನ 'ಎಕ್ಸ್' ಖಾತೆಯಲ್ಲಿ ಬರೆದುಕೊಂಡಿರುವ ಸಚಿವ ಕೃಷ್ಣ ಬೈರೇಗೌಡ, "ಬೆಂಗಳೂರು ಅಭಿವೃದ್ಧಿ ಸಚಿವನಿಗೆ ಮೆಟ್ರೋ ಉದ್ಘಾಟನೆಯಲ್ಲಿ ಮಾತನಾಡಲು ಇಲ್ಲ ಅವಕಾಶ. ಸಭಾ ಕಾರ್ಯಕ್ರಮದ ಡ್ರಾಫ್ಟ್ ನಲ್ಲಿ ನನ್ನ ಮಾತಿಗೆ ಅವಕಾಶ ನಿಗದಿಯಾಗಿತ್ತು. ನಿನ್ನೆ ರಾತ್ರಿ ಬಂದ ಅಂತಿಮ ಪಟ್ಟಿಯಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವರ ಮಾತನ್ನು ಕಟ್ ಮಾಡಲಾಗಿದೆ" ಎಂದು ಕಾರ್ಯಕ್ರಮದ ಡ್ರಾಫ್ಟ್ ಮತ್ತು ಅಂತಿಮ ಪಟ್ಟಿಯ ಪ್ರತಿಯನ್ನು ಹಾಕಿದ್ದಾರೆ.
"ಬಹುತೇಕ ಬಂಡವಾಳ ಖರ್ಚು ನಮ್ಮದು. ಕರ್ನಾಟಕಕ್ಕೆ ನ್ಯಾಯಯುತ ಪಾಲು ಕೇಳಿದರೆ ಈ ರೀತಿ ಶಿಕ್ಷೆ. ಪರವಾಗಿಲ್ಲ, ನೀವು ನನ್ನ ಮಾತನ್ನು ಕಟ್ ಮಾಡಬಹುದು. ಆದರೆ ಬೆಂಗಳೂರಿನ ಅಭಿವೃದ್ಧಿಗೆ ಕೆಲಸ ಮಾಡೋದನ್ನ ನಿಲ್ಲಿಸಲಿಕ್ಕೆ ಆಗೋದಿಲ್ಲ. ಇನ್ನೂ ಹೆಚ್ಚಿನ ಪರಿಶ್ರಮದಿಂದ ಕೆಲಸ ಮಾಡುತ್ತೇವೆ" ಎಂದು ಕೃಷ್ಣೇ ಬೈರೇಗೌಡ ಹೇಳಿದ್ದಾರೆ.




