ಸಂಪುಟಕ್ಕೆ ಸಂಬಂಧಿಸಿದ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ, ಸಿಎಂ ಹಾಗೂ ನಾಯಕತ್ವದೊಂದಿಗೆ ಚರ್ಚಿಸಿ : ಎನ್.ಎಸ್.ಭೋಸರಾಜು
ಬೆಂಗಳೂರು : ಕಾಂಗ್ರೆಸ್ ಶತಮಾನಕ್ಕೂ ಹೆಚ್ಚು ಕಾಲ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವುದಕ್ಕೆ ಕಾರಣ, ಅದು ವ್ಯಕ್ತಿಗಿಂತ ಸಂಘಟನೆ ಹಾಗೂ ವೈಯಕ್ತಿಕ ಮಹತ್ವಾಕಾಂಕ್ಷೆಗಿಂತ ಸಿದ್ಧಾಂತಗಳಿಗೆ ಆದ್ಯತೆ ನೀಡಿರುವುದು. ಹೀಗಾಗಿ ಪಕ್ಷದ ನಿಜವಾದ ಶಕ್ತಿ ಕೇವಲ ಚುನಾವಣಾ ಗೆಲುವುಗಳಲ್ಲ, ಅದು ನಮ್ಮ ಸಾಮೂಹಿಕ ಶಿಸ್ತು, ಮೌಲ್ಯಗಳ ಮೇಲಿನ ಅಚಲ ಬದ್ಧತೆಯಲ್ಲಿದೆ ಎಂದು ಮಾಜಿ ಸಚಿವ ಎನ್.ಎಸ್. ಭೋಸರಾಜು ಹೇಳಿದ್ದಾರೆ.
ಬುಧವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಎಲ್ಲ ಸಹೋದ್ಯೋಗಿ ಶಾಸಕರಿಗೆ ನನ್ನ ಮನವಿ ಏನೆಂದರೆ, ಸಂಪುಟಕ್ಕೆ ಸಂಬಂಧಿಸಿದ ಯಾವುದೇ ಭಿನ್ನಾಭಿಪ್ರಾಯಗಳಿದ್ದರೂ, ಸಿಎಂ ಹಾಗೂ ನಾಯಕತ್ವದೊಂದಿಗೆ ಚರ್ಚಿಸಬೇಕು. ಮಾಧ್ಯಮಗಳ ಮೂಲಕ ನಡೆಯುವ ಚರ್ಚೆಗಳು ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. ಬದಲಾಗಿ ಪಕ್ಷದ ಶ್ರೇಷ್ಠ ಶಕ್ತಿಯಾಗಿರುವ ಶಿಸ್ತಿಗೆ ಧಕ್ಕೆಯನ್ನು ಉಂಟುಮಾಡುತ್ತವೆ ಎಂದು ಎಚ್ಚರಿಸಿದ್ದಾರೆ.
ನನ್ನ ಸಾರ್ವಜನಿಕ ಜೀವನದ ಪಯಣ ನನಗೆ ಕಲಿಸಿದ ಮಹತ್ತರ ಪಾಠವೆಂದರೆ, ಕಾಂಗ್ರೆಸ್ ಸದಾ ಪ್ರಾಮಾಣಿಕತೆ, ತಾಳ್ಮೆ ಮತ್ತು ಪಕ್ಷದ ಮೇಲಿನ ಅಚಲ ಬದ್ಧತೆಯನ್ನು ಗೌರವಿಸುತ್ತದೆ. ಜವಾಬ್ದಾರಿಗಳು ಎಂದಿಗೂ ಗುರಿಯಲ್ಲ, ಅವು ದೀರ್ಘಕಾಲದ ನಿಷ್ಠಾವಂತ ಸೇವೆಗೆ ಪಕ್ಷವು ವ್ಯಕ್ತಿಯ ಮೇಲೆ ಇರಿಸುವ ವಿಶ್ವಾಸದ ಪ್ರತೀಕ ಎಂದು ಅವರು ತಿಳಿಸಿದ್ದಾರೆ.
ಆದುದರಿಂದ, ನಾವು ಎಲ್ಲರೂ ನಮ್ಮ ನಾಯಕತ್ವದ ವಿವೇಕ ಮತ್ತು ದೂರದೃಷ್ಟಿಯ ಮೇಲೆ ವಿಶ್ವಾಸವಿಟ್ಟು, ಪರಸ್ಪರ ಗೌರವ, ಸಂಯಮ ಮತ್ತು ಸಂಘಟನಾ ಶಿಸ್ತಿನೊಂದಿಗೆ ಒಗ್ಗಟ್ಟಾಗಿ ಕಾರ್ಯನಿರ್ವಹಿಸೋಣ. ಸಾಮೂಹಿಕ ಹೊಣೆಗಾರಿಕೆ ಯಾವುದೇ ವೈಯಕ್ತಿಕ ಆಸೆ-ಆಕಾಂಕ್ಷೆಗಳಿಗಿಂತ ದೊಡ್ಡದು. ಕಾಂಗ್ರೆಸ್ ಅನ್ನು ಇನ್ನಷ್ಟು ಬಲಿಷ್ಠಗೊಳಿಸುತ್ತಾ, ನಮ್ಮ ಸಂವಿಧಾನದ ಆದರ್ಶಗಳನ್ನು ಎತ್ತಿಹಿಡಿದು, ರಾಜ್ಯದ ಜನತೆ ಮತ್ತು ದೇಶದ ಸೇವೆಗೆ ಅಚಲ ಬದ್ಧತೆಯೊಂದಿಗೆ ಮುನ್ನಡೆಯೋಣ ಎಂದು ಅವರು ಸಲಹೆ ನೀಡಿದ್ದಾರೆ.






