ಪಥಸಂಚಲನಕ್ಕೆ ಅಧಿಕೃತ ಅನುಮತಿ ಪಡೆಯಿರಿ: ಆರೆಸ್ಸೆಸ್ಗೆ ಪ್ರಿಯಾಂಕ್ ಖರ್ಗೆ ಸಲಹೆ
"ಮಾಹಿತಿ ನೀಡುವುದೇ ಅನುಮತಿಯಲ್ಲ"

ಪ್ರಿಯಾಂಕ್ ಖರ್ಗೆ
ಬೆಂಗಳೂರು : 'ವಿಜಯದಶಮಿ ಪಥಸಂಚಲನಕ್ಕೆ 'ದಯವಿಟ್ಟು' ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ವಿವರಗಳನ್ನು ಒದಗಿಸಿ ಮತ್ತು ಅಧಿಕೃತ ಅನುಮತಿಗಾಗಿ ಕಾಯಿರಿ' ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ, ಆರೆಸ್ಸೆಸ್ ಗೆ ಸಲಹೆ ನೀಡಿದ್ದಾರೆ.
ಮಂಗಳವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಪ್ರಿಯಾಂಕ್ ಖರ್ಗೆ, ಆರೆಸ್ಸೆಸ್ ನ ನನ್ನ ಪ್ರಿಯ ಸ್ವಯಂ ಸೇವಕರೇ, ದಸರಾ ಸಂಭ್ರಮ ಜೋರಾಗಿದೆ ಎಂದು ಭಾವಿಸುತ್ತೇನೆ. ನಿಮ್ಮ ಉತ್ಸಾಹಕ್ಕೆ ತಣ್ಣೀರು ಎರಚುವ ಉದ್ದೇಶ ನನಗಿಲ್ಲ, ಆದರೆ ಒಂದು ಸಣ್ಣ ನೆನಪಿನ ಮಾತು, ಗೃಹ ಇಲಾಖೆಗೆ ಕೇವಲ 'ಮಾಹಿತಿ ನೀಡುವುದು, ಸಹಕರಿಸಿ ಅಥವಾ ಅಗತ್ಯ ವ್ಯವಸ್ಥೆಗಳನ್ನು ಮಾಡಿ' ಎಂದು ಹೇಳುವುದು, ಅಧಿಕೃತ "ಅನುಮತಿ ಪಡೆಯುವುದಕ್ಕೆ" ಸಮನಾಗುವುದಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಎಲ್ಲ ಸಂಘಟನೆಗಳಿಗೆ ಅನ್ವಯಿಸುವ ನಿಗದಿತ ವಿಧಾನದ ಪ್ರಕಾರ ದಯವಿಟ್ಟು ನಿಮ್ಮ(ಆರೆಸ್ಸೆಸ್) ಅರ್ಜಿಯನ್ನು ಸಲ್ಲಿಸಿ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಂದ ಅಧಿಕೃತ ಅನುಮತಿ ದೊರೆಯುವವರೆಗೆ ಕಾಯಿರಿ ಎಂದು ಸಲಹೆ ನೀಡಿದ್ದಾರೆ.
ನಿಮ್ಮದೇ ಆದ 'ಅಖಿಲ ಭಾರತೀಯ ಪ್ರತಿನಿಧಿ ಸಭಾ ವಾರ್ಷಿಕ ವರದಿ 2025–26' ಅನ್ನು ನೀವು ಓದಿರುತ್ತೀರಿ ಎಂದು ನಂಬಿದ್ದೇನೆ. ಆ ವರದಿಯ ಪ್ರಕಾರ, ಆರೆಸ್ಸೆಸ್ ಕರ್ನಾಟಕ ರಾಜ್ಯಾದ್ಯಂತ 562 ಪಥಸಂಚಲನಗಳನ್ನು ನಡೆಸಿದ್ದು, ಇದರಲ್ಲಿ ಸಮವಸ್ತ್ರ ಧರಿಸಿದ 2,21,963 ಮಂದಿ ಭಾಗವಹಿಸಿದ್ದರು. ಈಗ, ಲಕ್ಷಾಂತರ ಸಂಖ್ಯೆಯಲ್ಲಿರುವ ನೀವು ಒಂದೇ ದಿನ, ಒಂದೇ ಸಮಯದಲ್ಲಿ ಕರ್ನಾಟಕದ ಬೀದಿಗಳಲ್ಲಿ ಪಥಸಂಚಲನ ನಡೆಸಲು ಉದ್ದೇಶಿಸಿರುವಾಗ, ಪೊಲೀಸ್ ಇಲಾಖೆಯು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ.
ಪೋಲಿಸ್ ಸಿಬ್ಬಂದಿ ನಿಯೋಜನೆ, ಸಾರಿಗೆ ವ್ಯವಸ್ಥೆ, ಊಟೋಪಚಾರ, ಸಂಚಾರ ನಿರ್ವಹಣೆ, ಭದ್ರತಾ ವ್ಯವಸ್ಥೆಗಳು ಮತ್ತು ಇತರ ಆಡಳಿತಾತ್ಮಕ ಸಿದ್ಧತೆಗಳು ಇದರಲ್ಲಿ ಸೇರಿವೆ. ಇದೆಲ್ಲಕ್ಕೂ ಸೂಕ್ತ ಯೋಜನೆ, ಮಾನವಶಕ್ತಿ ಮತ್ತು ಸಾರ್ವಜನಿಕ ಸಂಪನ್ಮೂಲಗಳ ಅಗತ್ಯವಿರುತ್ತದೆ ಎಂದು ಪ್ರಿಯಾಂಕ್ ಖರ್ಗೆ ಉಲ್ಲೇಖಿಸಿದ್ದಾರೆ.






