ರಾಜ್ಯದಲ್ಲಿ ಸೈಬರ್ ವಂಚಕರ ವಿರುದ್ಧ ಕಾರ್ಯಾಚರಣೆ : 13 ಜನ ಸೆರೆ, 42 ಸಾವಿರ ಮ್ಯೂಲ್ ಬ್ಯಾಂಕ್ ಖಾತೆ ಬೆಳಕಿಗೆ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ರಾಜ್ಯಾದ್ಯಂತ ಸೈಬರ್ ವಂಚಕರ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿರುವ ಸಿಐಡಿ ಸೈಬರ್ ಕಮಾಂಡ್ ವಿಭಾಗದ ಅಧಿಕಾರಿಗಳು, 13 ಆರೋಪಿಗಳನ್ನು ಬಂಧಿಸಿ, 42 ಸಾವಿರ ಮ್ಯೂಲ್ ಬ್ಯಾಂಕ್ ಖಾತೆಗಳ ದೊಡ್ಡ ಜಾಲವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತು ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಸೈಬರ್ ಕಮಾಂಡ್ ಡಿಜಿಪಿ ಪ್ರಣವ್ ಮಹಾಂತಿ, ಕಳೆದ ಮೂರು ದಿನಗಳಿಂದ ರಾಜ್ಯದ 29 ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಸರಣಿ ದಾಳಿ ನಡೆಸಲಾಗಿದ್ದು, ಈ ವೇಳೆ 25 ಎಟಿಎಂ ಕಾರ್ಡ್ಗಳು, 13 ಚೆಕ್ ಬುಕ್ಗಳು ಹಾಗೂ 12 ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ಬಂಧಿತ ಆರೋಪಿಗಳು 10 ರಿಂದ 20 ಸಾವಿರ ರೂ. ಹಣ ನೀಡಿ ಸಾರ್ವಜನಿಕರಿಂದ ವೈಯಕ್ತಿಕ ಗುರುತಿನ ದಾಖಲೆಗಳು ಹಾಗೂ ಬ್ಯಾಂಕ್ ವಿವರಗಳನ್ನು ಪಡೆದು ನಕಲಿ ಹಾಗೂ ಮ್ಯೂಲ್ ಖಾತೆಗಳನ್ನು ಸೃಷ್ಟಿಸುತ್ತಿದ್ದರು. ಈ ಖಾತೆಗಳನ್ನು ಏಜೆಂಟರ ಮೂಲಕ ಸೈಬರ್ ಅಪರಾಧಿಗಳಿಗೆ ಮಾರಾಟ ಮಾಡಲಾಗುತ್ತಿದ್ದು, ಆನ್ಲೈನ್ ವಂಚನೆ, ಅಕ್ರಮ ಬೆಟ್ಟಿಂಗ್ ಹಾಗೂ ಡಿಜಿಟಲ್ ಅರೆಸ್ಟ್ ರೀತಿಯ ವಂಚನೆಗಳಿಗೆ ಬಳಸಲಾಗುತ್ತಿತ್ತು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ ಎಂದರು.
ಸೈಬರ್ ಕಮಾಂಡ್ ಪ್ರಾರಂಭವಾಗಿ ಕೇವಲ ಮೂರು ತಿಂಗಳಾಗಿದ್ದು, ಈ ಅವಧಿಯಲ್ಲೇ ದೊಡ್ಡ ಜಾಲವನ್ನು ಪತ್ತೆಹಚ್ಚಲಾಗಿದೆ ಎಂದ ಅವರು, ದಾಳಿ ಪ್ರಕರಣದಲ್ಲಿ ಶಿವಮೊಗ್ಗದಲ್ಲಿ ಒಬ್ಬ ಆರೋಪಿ ಬಂಧನಕ್ಕೊಳಗಾಗಿದ್ದು, ಆತ ಒಬ್ಬನೆ 19 ಬ್ಯಾಂಕ್ ಖಾತೆಗಳನ್ನು ಹೊಂದಿದ್ದನು. ಆ ಖಾತೆಗಳ ಮೂಲಕ ಸುಮಾರು 11 ಕೋಟಿ ರೂ. ವಹಿವಾಟು ನಡೆದಿದ್ದು, ಈ ಸಂಬಂಧ 96 ಪ್ರಕರಣಗಳು ದಾಖಲಾಗಿವೆ. ಒಂದು ಪ್ರಕರಣದಲ್ಲಿ ಮಾತ್ರವೇ 55 ಕೋಟಿ ರೂ. ವಂಚನೆ ನಡೆದಿರುವುದು ಪತ್ತೆಯಾಗಿದೆ ಎಂದು ತಿಳಿಸಿದರು.
ಈ ಕಾರ್ಯಾಚರಣೆಯ ಮುಖ್ಯ ಉದ್ದೇಶ ಮ್ಯೂಲ್ ಖಾತೆ ಮಾರಾಟದ ಹಿಂದಿರುವ ರೂವಾರಿಗಳನ್ನು ಪತ್ತೆಹಚ್ಚುವುದಾಗಿದ್ದು, ಮುಂದಿನ ದಿನಗಳಲ್ಲೂ ಈ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಪ್ರಣವ್ ಮೊಹಂತಿ ಉಲ್ಲೇಖಿಸಿದರು.






