ಖಾಸಗಿ ಕೆಲಸಗಳಿಗೆ ಸರಕಾರಿ ವಾಹನ ಬಳಸಲು ಪಾವತಿಸುತ್ತಿದ್ದ ದರ ಪರಿಷ್ಕೃತಗೊಳಿಸಿ ಆದೇಶ

ಬೆಂಗಳೂರು : ಸರಕಾರಿ ವಾಹನಗಳನ್ನು ಖಾಸಗಿ ಕೆಲಸಗಳಿಗೆ ಉಪಯೋಗಿಸಿದಾಗ ಪಾವತಿಸುತ್ತಿದ್ದ ದರವನ್ನು ಪರಿಷ್ಕೃತಗೊಳಿಸಿ ರಾಜ್ಯ ಸರಕಾರ ಬುಧವಾರ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ದರವು ಶೇ.60ಕ್ಕೂ ಮಿಗಿಲಾಗಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ, ಸರಕಾರಿ ಅಧಿಕಾರಿಗಳು ಖಾಸಗಿ ಉಪಯೋಗಕ್ಕಾಗಿ ಸರಕಾರಿ ವಾಹನಗಳನ್ನು ಬಳಕೆ ಮಾಡಿದರೆ ಮಾಸಿಕ 1,600 ರೂ.(ತಿಂಗಳಿಗೆ ಕ್ರಮಿಸುವ ದೂರ 500 ಕಿ.ಮೀ.ವರೆಗೆ ಮಾತ್ರ) ಹಾಗೂ 500 ಕಿ.ಮೀ.ಗಿಂತ ಮೀರಿದ್ದಲ್ಲಿ ಪ್ರತಿ ಕಿ.ಮೀ.ಗೆ 6 ರೂ. ದರದಂತೆ ಹೆಚ್ಚುವರಿಯಾಗಿ ಪಾವತಿಸಿ, ಖಾಸಗಿ ಪ್ರವಾಸಕ್ಕೆ ಉಪಯೋಗಿಸುವಂತೆ ಆದೇಶದಲ್ಲಿ ಅನುಮತಿ ನೀಡಲಾಗಿದೆ.
ಕರ್ನಾಟಕ ಆರ್ಥಿಕ ಸಂಹಿತೆಯ 174(4)ನೇ ಅನುಚ್ಛೇದದಡಿಯಲ್ಲಿ ನಾಮ ನಿರ್ದಿಷ್ಟ ವಾಹನವನ್ನು ಹೊಂದಿರುವ ಯಾವುದೇ ಅಧಿಕಾರಿಯು ಸರಕಾರಿ ವಾಹನವನ್ನು ಪಾವತಿ ಆಧಾರದ ಮೇಲೆ ಖಾಸಗಿ ಪ್ರವಾಸಕ್ಕೆ ಉಪಯೋಗಿಸಬಹುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.
Next Story




