ಅಧಿಕಾರಕ್ಕಾಗಿ ಪಕ್ಷ, ಸಿದ್ದಾಂತವನ್ನು ಬದಲಾಯಿಸಿಲ್ಲ : ಜಗದೀಶ್ ಶೆಟ್ಟರ್ ಗೆ ಬಿ.ಕೆ.ಹರಿಪ್ರಸಾದ್ ತಿರುಗೇಟು

ಬಿ.ಕೆ.ಹರಿಪ್ರಸಾದ್, ಜಗದೀಶ್ ಶೆಟ್ಟರ್
ಬೆಂಗಳೂರು : ‘ಆರೆಸೆಸ್ಸ್ ಬಗ್ಗೆ ಹಾದಿ ಬೀದಿಯಲ್ಲಿ ಮಾತನಾಡುವುದು ಬೇಡ. ಸಂಘ ಪರಿವಾರದ ಕರಾಳ ಇತಿಹಾಸವನ್ನು ದಾಖಲೆ ಸಮೇತ ಬಿಚ್ಚಿಡಲು ನಾನಂತೂ ಸಿದ್ಧ. ಅದಕ್ಕಾಗಿ ಬಹಿರಂಗ ಚರ್ಚೆಗೆ ವೇದಿಕೆಯಾಗಲಿ. ಒಂದಿಷ್ಟು ತಯಾರಿ-ತಾಲೀಮುಗಳೊಂದಿಗೆ ಬಿಜೆಪಿ ನಾಯಕರಾದಿಯಾಗಿ ಸಂಘದ ಪ್ರಮುಖರನ್ನೂ ಕರೆದುಕೊಂಡು ಬನ್ನಿ’ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಇಂದಿಲ್ಲಿ ಸವಾಲು ಹಾಕಿದ್ದಾರೆ.
ಶನಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಚುನಾವಣಾ ರಾಜಕೀಯದಲ್ಲಿ ಮತದಾರರು ನೀಡಿದ ಸೋಲು-ಗೆಲುವಿನ ತೀರ್ಪಿಗೆ ತಲೆ ಬಾಗಿದ್ದೇನೆಯೇ ಹೊರತು, ಅಧಿಕಾರಕ್ಕಾಗಿ ಪಕ್ಷ-ಸಿದ್ದಾಂತವನ್ನು ಬದಲಾಯಿಸಿಲ್ಲ ಶೆಟ್ಟರ್ ಅವರೇ. ನನ್ನ ಇಡೀ ಚುನಾವಣಾ ರಾಜಕೀಯ ಜೀವನದಲ್ಲಿ ಎಂದೂ ಜಾತಿಯ ಹೆಸರಿನಲ್ಲಿ, ಹಣ ಬಲದ ಮೇಲೆ ಚುನಾವಣೆ ಎದುರಿಸಿಲ್ಲ. ಮುಂದೆಯೂ ಜಾತಿ, ಧರ್ಮ, ಹಣ, ತೋಳ್ಬಲದ ಮೇಲೆ ಚುನಾವಣೆ ನಡೆಸುವುದೂ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
‘ಗ್ರಾಮ ಪಂಚಾಯಿತಿ ಚುನಾವಣೆಯನ್ನೂ ಎದುರಿಸದೇ ನೇರವಾಗಿ ಗುಜರಾತಿನಲ್ಲಿ ಸಿಎಂ ಆದವರ ಹೆಸರಿನ ಮೇಲೆಯೇ ಸಂಸದರಾಗಿ ಚುನಾವಣಾ ರಾಜಕೀಯದ ಸೋಲು-ಗೆಲುವಿನ ಬಗ್ಗೆ ಮಾತಾಡುವುದು ಹಾಸ್ಯಸ್ಪದ. ಅಷ್ಟಕ್ಕೂ ಸಂಘಕ್ಕೂ ರಾಜಕೀಯಕ್ಕೂ ಸಂಬಂಧವೇ ಇಲ್ಲ ಎಂದು ‘ನವರಂಗಿ’ ಆಟವಾಡುವಾಗ ಗೋಸುಂಬೆ ನಾಟಕ ಯಾಕೆ ಶೆಟ್ಟರ್ ಅವರೇ?’ ಎಂದು ಹರಿಪ್ರಸಾದ್ ಪ್ರಶ್ನಿಸಿದ್ದಾರೆ.
‘ದೇಶದಲ್ಲೇ ಮಾದರಿ ಚುನಾವಣೆ ನಡೆಸಿ ಗೆಲ್ಲುವ ನಿಮ್ಮ ಚುನುವಣಾ ತಂತ್ರಗಾರಿಕೆ ಬಗ್ಗೆ ಮಾತಾಡುವುದು ಬೇಡ ಬಿಡಿ ಜಗದೀಶ್ ಶೆಟ್ಟರ್ ಅವರೇ. ಅದರ ಬಗ್ಗೆ ಬಹಿರಂಗ ಚರ್ಚೆಗೆ ಆಹ್ವಾನಿಸಬೇಡಿ. ಆದರೆ, ಚುನಾವಣೆ ರಾಜಕೀಯಕ್ಕೂ, ಪ್ರಜಾಪ್ರಭುತ್ವದ ಪ್ರಕ್ರಿಯೆಗೂ, ಸಂಘ ಪರಿವಾರದ ಸಂಬಂಧಗಳ ಬಗ್ಗೆ ಚರ್ಚೆಗೆ ಸಿದ್ಧವಿದ್ದೇನೆ’ ಎಂದು ಹರಿಪ್ರಸಾದ್ ಆಹ್ವಾನ ನೀಡಿದ್ದಾರೆ.
ಚುನಾವಣಾ ರಾಜಕೀಯದಲ್ಲಿ ಮತದಾರರು ನೀಡಿದ ಸೋಲು ಗೆಲುವಿನ ತೀರ್ಪಿಗೆ ತಲೆ ಬಾಗಿದ್ದೇನೆ ಹೊರತು, ಅಧಿಕಾರಕ್ಕಾಗಿ ಪಕ್ಷ- ಸಿದ್ದಾಂತವನ್ನು ಬದಲಾಯಿಸಿಲ್ಲ @JagadishShettar ಅವರೇ..ನನ್ನ ಇಡೀ ಚುನಾವಣಾ ರಾಜಕೀಯ ಜೀವನದಲ್ಲಿ ಎಂದೂ ಜಾತಿಯ ಹೆಸರಿನಲ್ಲಿ, ಹಣ ಬಲದ ಮೇಲೆ ಚುನಾವಣೆ ಎದುರಿಸಿಲ್ಲ. ಮುಂದೆಯೂ ಜಾತಿ,ಧರ್ಮ, ಹಣಬಲ, ತೋಳ್ಬಲದ ಮೇಲೆ…
— Hariprasad.B.K. (@HariprasadBK2) October 25, 2025







