ಪಿಡಿಒ ಕೌನ್ಸಿಲಿಂಗ್ ವರ್ಗಾವಣೆಗೆ ಚಾಲನೆ | ಪಂಚಾಯತ್ ರಾಜ್ ಇಲಾಖೆಯಲ್ಲಿ ಚರಿತ್ರಾರ್ಹ ದಿನ: ಸಚಿವ ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ
ಬೆಂಗಳೂರು, ಸೆ.3 : ಗ್ರಾಮ ಪಂಚಾಯತ್ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಪ್ರಮುಖ ಬೇಡಿಕೆಯಾಗಿದ್ದ ಕೌನ್ಸಿಲಿಂಗ್ ವರ್ಗಾವಣೆಗಳನ್ನು ಜಾರಿಗೆ ತರಲಾಗಿದ್ದು, ಪಿಡಿಒಗಳು ಗ್ರಾಮಗಳ ಅಭಿವೃದ್ಧಿಯತ್ತ ಆದ್ಯತೆ ನೀಡಿ ಕಾರ್ಯನಿರ್ವಹಿಸುವಲ್ಲಿ ಕಂಕಣಬದ್ಧರಾಗಬೇಕಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಬುಧವಾರ ನಗರದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ವರ್ಗಾವಣೆಯನ್ನು ಪಾರದರ್ಶಕವಾಗಿ ಕೌನ್ಸಿಲಿಂಗ್ ಮೂಲಕ ನಡೆಸುವ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪುಟಗಳಲ್ಲಿ ಇಂದು ಚರಿತ್ರಾರ್ಹ ದಿನವಾಗಿದೆ. ತಮ್ಮ ಇಚ್ಛೆಗೆ ಅನುಸಾರವಾಗಿ ವರ್ಗಾವಣೆಗಳನ್ನು ಸ್ವಯಂ ನಿರ್ಧರಿಸುವ ಅವಕಾಶವನ್ನು ಕಲ್ಪಿಸಿಕೊಡುವ ಮೂಲಕ ಇಲಾಖೆಯಲ್ಲಿ ಮಹತ್ತರ ಬದಲಾವಣೆ ತರಲಾಗಿದೆ ಎಂದು ತಿಳಿಸಿದರು.
ಸ್ಥಳೀಯ ಸರಕಾರಗಳಾಗಿ ಕೆಲಸ ಮಾಡುತ್ತಿರುವ ಪಂಚಾಯತ್ ವ್ಯವಸ್ಥೆಯನ್ನು ಸದೃಢಗೊಳಿಸಲು ಪಿಡಿಒಗಳು ಪಣತೊಡಬೇಕು. ನೌಕರರು ಹೊಂದಾಣಿಕೆ ಮಾಡಿಕೊಂಡಲ್ಲಿ ಪಿಡಿಒಗಳ ಪಟ್ಟಿಯನ್ನು ಅಂತಿಮಗೊಳಿಸಿ ಬೇಡಿಕೆಯನ್ನು ಈಡೇರಿಸಲಾಗುವುದೆಂದು ಅವರು ಹೇಳಿದರು.
ಇಂದಿನಿಂದ ಸೆ.8ರವರೆಗೆ ವಿಶೇಷ ಪ್ರಕರಣಗಳ (ವಿಶೇಷಚೇತನರು, ಗಂಭೀರ ಅನಾರೋಗ್ಯ ಹಾಗೂ ಪತಿ-ಪತ್ನಿ ಪ್ರಕರಣಗಳು) ಮೊದಲ ಸುತ್ತಿನ ಕೌನ್ಸಿಲಿಂಗ್ ಆರಂಭಗೊಂಡಿದ್ದು, ನೌಕಕರು ಆಯ್ಕೆ ಮಾಡಿಕೊಂಡ ಸ್ಥಳಕ್ಕೆ ವರ್ಗಾವಣೆಯ ಆದೇಶವನ್ನು ಎರಡು ನಿಮಿಷಗಳ ಅವಧಿಯಲ್ಲಿ ಸಚಿವರು ಹಾಗೂ ಅಧಿಕಾರಿಗಳು ಕೆಲವು ನೌಕರರಿಗೆ ವಿತರಿಸಿದರು.
ಸೆ.10ರಿಂದ 20ರವರೆಗೆ ಕಡ್ಡಾಯ ವರ್ಗಾವಣೆ ಕೌನ್ಸಿಲಿಂಗ್ ಹಾಗೂ ಸೆ.23 ಹಾಗೂ 24ರಂದು ಸಾಮಾನ್ಯ ಕೋರಿಕೆ ವರ್ಗಾವಣೆಗಳ ಕೌನ್ಸಿಲಿಂಗ್ ಪ್ರಕ್ರಿಯೆಗಳು ಜರುಗಲಿವೆ. ಪ್ರಸಕ್ತ ಸಾಲಿನಲ್ಲಿ ಒಂದು ಬಾರಿಗೆ ಅನ್ವಯಿಸುವಂತೆ ಒಂದೇ ಸ್ಥಳದಲ್ಲಿ 5 ವರ್ಷಕ್ಕಿಂತ ಹೆಚ್ಚು ಸೇವೆ ಸಲ್ಲಿಸಿದ ಎಲ್ಲ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಕೌನ್ಸಿಲಿಂಗ್ ಮೂಲಕ ವರ್ಗಾವಣೆಗೊಳಿಸಲು ಅವಕಾಶ ಕಲ್ಪಿಸಲಾಗಿದೆ.
ಕಾರ್ಯಕ್ರಮದಲ್ಲಿ ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರಣದೀಪ್, ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತೆ ಡಾ.ಅರುಂಧತಿ ಚಂದ್ರಶೇಖರ್ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.







