ನಾಳೆ ಪಿಜಿಸಿಇಟಿ, ಡಿಸಿಇಟಿ ಪರೀಕ್ಷೆ

ಸಾಂದರ್ಭಿಕ ಚಿತ್ರ | PC : freepik.com
ಬೆಂಗಳೂರು : ಎಂ.ಟೆಕ್, ಡಿಸಿಇಟಿ ಪ್ರವೇಶ ಮತ್ತು ಐಎಎಸ್, ಕೆಎಎಸ್ ತರಬೇತಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ನಾಳೆ(ಮೇ 31) ರಾಜ್ಯದ 113 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ.
ಈ ಪರೀಕ್ಷೆಗಳಿಗೂ ಅಭ್ಯರ್ಥಿಗಳನ್ನು ತೀವ್ರ ತಪಾಸಣೆ ಮಾಡುವುದರ ಜತೆಗೆ ಮುಖ ಚಹರೆ ಪತ್ತೆ ತಂತ್ರಜ್ಞಾನದ ಮೂಲಕವೇ ಅಭ್ಯರ್ಥಿಗಳ ಗುರುತು ಪತ್ತೆಹಚ್ಚಲಾಗುತ್ತದೆ. ನಕಲಿ ಅಭ್ಯರ್ಥಿಗಳ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಈ ಪರೀಕ್ಷೆಗಳನ್ನು 52,352 ಮಂದಿ ತೆಗೆದುಕೊಂಡಿದ್ದಾರೆ.
ಡಿಪ್ಲೊಮಾ ಮುಗಿಸಿ, ಎಂಜಿನಿಯರಿಂಗ್ ಪದವಿಯ 3ನೇ ಸೆಮಿಸ್ಟರ್ ಅಥವಾ ಎರಡನೇ ವರ್ಷಕ್ಕೆ ನೇರ ಪ್ರವೇಶ ಕಲ್ಪಿಸುವುದಕ್ಕೆ ರಾಜ್ಯದ 46 ಕೇಂದ್ರಗಳಲ್ಲಿ ಡಿಸಿಇಟಿ ನಡೆಸುತ್ತಿದ್ದು, 21,201 ಮಂದಿ ಪರೀಕ್ಷೆ ತೆಗೆದುಕೊಳ್ಳಲು ನೋಂದಣಿ ಮಾಡಿಕೊಂಡಿದ್ದಾರೆ. ಎಂ.ಟೆಕ್ನ ಮ್ಯಾಕಾನಿಕಲ್, ಸಿವಿಲ್ ಮತ್ತು ಎಲೆಕ್ಟ್ರಿಕಲ್ ಸೈನ್ಸ್ ಕೋರ್ಸ್ಗಳ ಪ್ರವೇಶಕ್ಕೆ 13 ಕೇಂದ್ರಗಳಲ್ಲಿ ಪಿಜಿಸಿಇಟಿ ನಡೆಯುತ್ತಿದ್ದು, 3,756 ಮಂದಿ ಪರೀಕ್ಷೆ ಬರೆಯುತ್ತಿದ್ದಾರೆ.
ಸಮಾಜ ಕಲ್ಯಾಣ ಇಲಾಖೆ ಕೆಎಎಸ್ ಪರೀಕ್ಷೆಯ ತರಬೇತಿಗೆ ನಡೆಸುವ ಪರೀಕ್ಷೆಯನ್ನು 19,992 ಮಂದಿ ತೆಗೆದುಕೊಂಡಿದ್ದು, 14 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳ ಸಲುವಾಗಿ ಐಎಎಸ್ ಮತ್ತು ಕೆಎಎಸ್ ತರಬೇತಿಗಾಗಿ ಪರೀಕ್ಷೆ ನಡೆಯಲಿದ್ದು, ಅದನ್ನು 7,403 ಮಂದಿ ತೆಗೆದುಕೊಂಡಿದ್ದಾರೆ.







