ಭಾರತ ಜೋಡೋ ನ್ಯಾಯ ಯಾತ್ರೆ’ಗೆ ತಾತ್ವಿಕ ಬೆಂಬಲ: ಫಾಫ್ರೆ
ʻಪ್ರಾಥಮಿಕದಿಂದ ಸ್ನಾತೋಕತ್ತರ ಪದವಿಯ ವರೆಗೆ ‘ಉಚಿತ ಶಿಕ್ಷಣದ ಭರವಸೆ ನೀಡಿ’
ಬೆಂಗಳೂರು: ‘ಭಾರತ ಜೋಡೋ ನ್ಯಾಯ’ ಯಾತ್ರೆಯ ನಂತರ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಾಥಮಿಕದಿಂದ ಸ್ನಾತೋಕತ್ತರ ಪದವಿಯವರೆಗೆ ನೆರೆಹೊರೆಯ ಶಾಲಾ-ಕಾಲೇಜುಗಳಲ್ಲಿ ಉಚಿತ ಶಿಕ್ಷಣವನ್ನು ಒದಗಿಸುವ ಭರವಸೆಯನ್ನು ಒಂದು ಸಂವಿಧಾನ ಬದ್ಧ ಗ್ಯಾರಂಟಿ ಮತ್ತು ಕನಿಷ್ಠ ಕಾರ್ಯಕ್ರಮವಾಗಿ ಇಂಡಿಯಾ ಒಕ್ಕೂಟವು ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿಬೇಕು ಎಂದು ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ(ಫಾಫ್ರೆ) ಒತ್ತಾಯಿಸಿದೆ.
ರವಿವಾರ ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಜನಾಂದೋಲನಗಳ ಸಮನ್ವಯ(ಫಾಫ್ರೆ) ಸಂಘಟನೆ ನೇತೃತ್ವದಲ್ಲಿ ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿ.ಪಿ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‍ವಾದ) ಸಂಚಾಲಕ ಮಾವಳ್ಳಿ ಶಂಕರ್, ಬಸವರಾಜ ಗುರಿಕಾರ, ಉಮೇಶ್ ದೊಡ್ಡಗಂಗನವಾಡಿ, ಪಾರ್ವತಿ, ಲೋಕೇಶ್ ತಾಳೀಕಟ್ಟೆ, ಬಿ.ಎಸ್.ಯೋಗಾನಂದ, ಗಂಗಾಧರ ಸೇರಿದಂತೆ ಮತ್ತಿತರರು ಪ್ರಕಟನೆ ಹೊರಡಿಸಿದ್ದು, ಸಾಮಾಜಿಕ ಮತ್ತು ಆರ್ಥಿಕ ನ್ಯಾಯಕ್ಕಾಗಿ ರಾಹುಲ್‍ಗಾಂಧಿ ಪ್ರಾರಂಭಿಸಿರುವ ‘ಭಾರತ ಜೋಡೋ ನ್ಯಾಯ ಯಾತ್ರೆ’ಗೆ ತಾತ್ವಿಕ ಬೆಂಬಲ ಸೂಚಿಸಿದ್ದಾರೆ.
ಅಸಮಾನತೆಯನ್ನು ಸ್ವಾತಂತ್ರ್ಯಾನಂತರ ತೊಡೆದು ಹಾಕಲು ಪ್ರಾಮಾಣಿಕ ಪ್ರಯತ್ನದ ಕೊರತೆ, ಇಂದು ಭಾರತದಲ್ಲಿ ಸಾಮಾಜಿಕ ಅಸಮಾನತೆ ಮತ್ತು ಆರ್ಥಿಕ ಅಸಮಾನತೆ ದೇಶದಲ್ಲಿ ಬಡವರು ಮತ್ತು ಶ್ರೀಮಂತರ ನಡುವೆ ದೊಡ್ಡ ಕಂದಕವನ್ನೇ ಸೃಷ್ಟಿ ಮಾಡಿರುವುದಲ್ಲದೆ ಸಾಮಾಜಿಕ ಅಸಮಾನತೆ ಸಾಮರಸ್ಯ, ಭಾತೃತ್ವ, ಬಾಂಧವ್ಯಗಳನ್ನು ಘಾಸಿಗೊಳಿಸಿ ಅರಾಜಕತೆ ಮತ್ತು ಅಸಹಿಷ್ಣುತೆಯನ್ನು ಹುಟ್ಟು ಹಾಕಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮ ದೇಶದ ಮೊದಲ ಮೂರು ಶಿಕ್ಷಣದ ರಾಷ್ಟ್ರೀಯ ನೀತಿಗಳಾದ 1968, 1986 ಮತ್ತು 1992ನೀತಿಗಳು ಬಲವಾಗಿ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಪ್ರತಿಪಾದಿಸಿವೆ. ಆದರೂ ನಾವು ಅದನ್ನು ಕಟ್ಟಿಕೊಡುವಲ್ಲಿ ದಯನೀಯವಾಗಿ ಸೋತಿದ್ದೇವೆ. 2020ರ ನೀತಿಯಲ್ಲಿ ಸಮಾನ ಶಿಕ್ಷಣದ ಕಲ್ಪನೆಯನ್ನು ಪೂರ್ಣವಾಗಿ ಕೈಬಿಟ್ಟಿದ್ದೇವೆ. ಹೀಗಾಗಿ, ‘ಭಾರತ ಜೋಡೋ ನ್ಯಾಯ’ ಯಾತ್ರೆಯ ಸಂದರ್ಭದಲ್ಲಿ ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯನ್ನು ಕಟ್ಟಿಕೊಡದು ಹೊರತು ಸಾಮಾಜಿಕ ಹಾಗು ಆರ್ಥಿಕ ಸಮಾನತೆ ಸಾಧ್ಯವೇ ಎಂಬ ಬಗ್ಗೆ ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳುವ ಕೆಲಸವೂ ನಡೆಯಬೇಕು ಎಂದು ಒತ್ತಾ¬ಸಿದ್ದಾರೆ.
ರಾಹುಲ್ ಗಾಂಧಿಯವರು ಕೆಲವು ತಿಂಗಳುಗಳ ಹಿಂದೆ, ಪೂರ್ವ-ಪ್ರಾಥಮಿಕದಿಂದ ಸ್ನಾತೋಕತ್ತರ ಪದವಿಯವರೆಗೆ ಉಚಿತ ಶಿಕ್ಷಣ ನೀಡುವ ಬಗ್ಗೆ ಚರ್ಚೆಯನ್ನು ಹುಟ್ಟು ಹಾಕಿದ್ದರು. ಅದು ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಮಹತ್ವದ ಸುದ್ದಿಯಾಗಿತ್ತು. ಸಾಮಾಜಿಕ ಆರ್ಥಿಕ ಸಮಾನತೆಯ ಹೋರಾಟದಲ್ಲಿ ಈ ಅಭಿಪ್ರಾಯ ನಿರ್ಣಾಯಕವಾಗುತ್ತದೆ. ಇದು ಒಂದು ಉತ್ತಮ ಬೆಳವಣಿಗೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಎಲ್ಲಾ ಕಾರಣಗಳಿಂದ, ‘ಭಾರತ ಜೋಡೋ ನ್ಯಾಯ ಯಾತ್ರೆ’ಯು, ಸಾಮಾಜಿಕ ಹಾಗು ಆರ್ಥಿಕ ನ್ಯಾಯವನ್ನು ಕೊಡಮಾಡುವಲ್ಲಿ ಶಿಕ್ಷಣದಲ್ಲಿನ ಸಮಾನತೆಯನ್ನು ಒಂದು ಮೂಲಭೂತ ಮತ್ತು ಪೂರ್ವಾಪೇಕ್ಷಿತ ಆದ್ಯತೆಯನ್ನಾಗಿ ಗುರುತಿಸಿ, ಯಾತ್ರೆಯ ಸಂದರ್ಭದಲ್ಲಿ ಈ ವಿಷಯದ ಬಗ್ಗೆಯೂ ಜನಾಭಿಪ್ರಾಯವನ್ನು ಸಂಗ್ರಹಿಸಬೇಕು ಎಂದು ಆಗ್ರಹಿಸಿದ್ದಾರೆ.







