ಮುಂದಿನ ಶೈಕ್ಷಣಿಕ ವರ್ಷದಿಂದ ಫಿಸಿಯೋಥೆರಪಿ, ಆಕ್ಯುಪೇಷನಲ್ ಥೆರಪಿ ಪ್ರವೇಶಕ್ಕೆ NEET ಪರೀಕ್ಷೆ

ಬೆಂಗಳೂರು : ಫಿಸಿಯೋಥೆರಪಿ ಹಾಗೂ ಆಕ್ಯುಪೇಷನಲ್ ಥೆರಪಿ ವಿಭಾಗಗಳ ಪದವಿ ಕೋರ್ಸ್‌ಗಳಿಗೆ 2026–27ರ ಶೈಕ್ಷಣಿಕ ವರ್ಷದಿಂದ ರಾಷ್ಟ್ರೀಯ ಅರ್ಹತಾ–ಪ್ರವೇಶ ಪರೀಕ್ಷೆ (NEET) ಮೂಲಕವೇ ಪ್ರವೇಶ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಕರ್ನಾಟಕ ಸ್ಟೇಟ್ ಅಲೈಡ್ ಆಂಡ್ ಹೆಲ್ತ್‌ಕೇರ್ ಕೌನ್ಸಿಲ್ ತಿಳಿಸಿದೆ.
ಶುಕ್ರವಾರ ಪ್ರಕಟಿಸಿದ ಪ್ರಕಟನೆಯಲ್ಲಿ ಕೌನ್ಸಿಲ್ ಅಧ್ಯಕ್ಷ ಪ್ರೊ.ಯು.ಟಿ.ಇಫ್ತಿಕಾರ್ ಅಲಿ ಫರೀದ್, ರಾಷ್ಟ್ರೀಯ ಅಲೈಡ್ ಮತ್ತು ಹೆಲ್ತ್‌ಕೇರ್ ಪ್ರೊಫೆಶನ್ಸ್ ಆಯೋಗ (NCAHP), ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಕ್ಕೆ ನೀಡಿರುವ ಸೂಚನೆಯ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಅಧಿಸೂಚನೆಯಂತೆ, NCAHP ಅಲೈಡ್ ಮತ್ತು ಹೆಲ್ತ್‌ಕೇರ್ ಪದವಿಗೆ ಸಂಬಂಧಿಸಿದಂತೆ ವರ್ಗವಾರು ಪ್ರವೇಶ ಮಾನದಂಡಗಳನ್ನು ಅಂತಿಮಗೊಳಿಸಿದ್ದು, ಅವುಗಳನ್ನು 2026–27ರ ಶೈಕ್ಷಣಿಕ ವರ್ಷದಿಂದ ಜಾರಿಗೊಳಿಸುವಂತೆ ವಿಶ್ವವಿದ್ಯಾಲಯ ಅನುದಾನ ಆಯೋಗಕ್ಕೆ ತಿಳಿಸಿದೆ.
ಮಾರ್ಗಸೂಚಿಗಳ ಪ್ರಕಾರ, ವರ್ಗ–3ರ ಅಡಿಯಲ್ಲಿ ವರ್ಗೀಕರಿಸಲಾದ ಬ್ಯಾಚುಲರ್ ಆಫ್ ಫಿಸಿಯೋಥೆರಪಿ (ಬಿಪಿಟಿ) ಹಾಗೂ ವರ್ಗ–6ರ ಅಡಿಯಲ್ಲಿ ವರ್ಗೀಕರಿಸಲಾದ ಬ್ಯಾಚುಲರ್ ಆಫ್ ಆಕ್ಯುಪೇಷನಲ್ ಥೆರಪಿ (ಬಿಒಟಿ) ಕೋರ್ಸ್‌ಗಳಿಗೆ ಪ್ರವೇಶವನ್ನು ಕಡ್ಡಾಯವಾಗಿ NEET ಮೂಲಕವೇ ನಡೆಸಬೇಕು. ಈ ಪ್ರವೇಶ ಪ್ರಕ್ರಿಯೆ ನ್ಯಾಷನಲ್ ಕಮಿಷನ್ ಫಾರ್ ಅಲೈಡ್ ಆಂಡ್ ಹೆಲ್ತ್‌ಕೇರ್ ಪ್ರೊಫೆಶನ್ಸ್ ಆಕ್ಟ್ 2021ರ ನಿಯಮಾವಳಿಗಳಿಗೆ ಅನುಗುಣವಾಗಿರುತ್ತದೆ.
ವಿಶ್ವವಿದ್ಯಾಲಯಗಳು, ಖಾಸಗಿ ವಿವಿಗಳು ಹಾಗೂ ಡೀಮ್ಡ್–ಟು–ಬಿ ವಿವಿಗಳ ಕುಲಪತಿಗಳು ಪರಿಷ್ಕೃತ ಪ್ರವೇಶ ವಿಧಾನವನ್ನು ಗಮನಿಸಬೇಕು ಎಂದು ಕೌನ್ಸಿಲ್ ಸೂಚಿಸಿದೆ. ಜೊತೆಗೆ, ಕಾಲೇಜುಗಳು, ಅಧ್ಯಾಪಕ ವೃಂದ ಹಾಗೂ ಈ ಕೋರ್ಸ್‌ಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಲ್ಲಿ ಈ ಮಾಹಿತಿಯನ್ನು ವ್ಯಾಪಕವಾಗಿ ಪ್ರಸಾರ ಮಾಡುವಂತೆ ಕೌನ್ಸಿಲ್ ಮನವಿ ಮಾಡಿದೆ.
ಇದಲ್ಲದೆ, 2026–27 ಶೈಕ್ಷಣಿಕ ವರ್ಷದಿಂದ NCAHP ನಿಗದಿಪಡಿಸಿರುವ ಪ್ರವೇಶ ಪ್ರಕ್ರಿಯೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ವಿಶ್ವವಿದ್ಯಾಲಯಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.







