ತಿಪಿಟಕ ಗ್ರಂಥಗಳನ್ನು ಪಾಲಿ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಲು ಕ್ರಮ : ಸಚಿವ ಶಿವರಾಜ ತಂಗಡಗಿ

ಸಚಿವ ಶಿವರಾಜ್ ಎಸ್.ತಂಗಡಗಿ
ಬೆಂಗಳೂರು: ಬೌದ್ಧ ಧರ್ಮದ ಪವಿತ್ರ ಗ್ರಂಥಗಳೆಂದು ಪರಿಗಣಿಸಲ್ಪಡುವ ತಿಪಿಟಕ ಗ್ರಂಥಗಳನ್ನು ಪಾಲಿ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಿ ಪ್ರಕಟಿಸುವ ಯೋಜನೆ ಕೈಗೆತ್ತಿಕೊಳ್ಳಲಾಗುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಬೆಂಗಳೂರಿನ ಸದಾಶಿವನಗರದಲ್ಲಿರುವ ನಾಗಸೇನಾ ಬುದ್ಧ ವಿಹಾರದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಗವಾನ್ ಬುದ್ಧರ ಬೋಧನೆಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತವಾಗಿವೆ. ಮನುಷ್ಯ ಅತಿಯಾದ ಆಸೆ ಹಾಗೂ ಹಿಂಸೆಯಲ್ಲಿ ಮುಳುಗಿರುವ ಈ ಸಂದರ್ಭದಲ್ಲಿ ಬುದ್ಧರು ಬೋಧಿಸಿದ ಶಾಂತಿ, ಕರುಣೆ ಮತ್ತು ಮಾನವೀಯತೆ ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದರು.
ಈ ತತ್ವಗಳನ್ನು ಪುಸ್ತಕಗಳ ಮೂಲಕ ಇಂದಿನ ವಿದ್ಯಾರ್ಥಿಗಳು ಹಾಗೂ ಮುಂದಿನ ತಲೆಮಾರಿಗೆ ತಲುಪಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಸಚಿವರು ತಿಳಿಸಿದರು.
ಬೌದ್ಧರ ಸ್ಮಾರಕಗಳ ರಕ್ಷಣೆ ಮತ್ತು ಪುನರ್ನಿರ್ಮಾಣ ಅತ್ಯಂತ ಮುಖ್ಯವಾದ ಕೆಲಸವಾಗಿದೆ. ಸರ್ಕಾರ ಈಗಾಗಲೇ ಈ ಕಾರ್ಯವನ್ನು ಸನ್ನತಿಯಿಂದ ಆರಂಭಿಸಿದ್ದು, ಅದನ್ನು ಶೀಘ್ರ ಕಾರ್ಯಗತಗೊಳಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಬುದ್ಧ, ಬಸವಣ್ಣ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಈ ಮೂರು ಮಹಾಪುರುಷರ ಚಿಂತನೆ ಒಂದೇ ಆಗಿದ್ದು, ಅವರನ್ನು ಅನುಸರಿಸಿದರೆ ಮನುಷ್ಯ ಜೀವನ ಸಾರ್ಥಕವಾಗುತ್ತದೆ ಎಂದು ಶಿವರಾಜ ತಂಗಡಗಿ ಅಭಿಪ್ರಾಯಪಟ್ಟರು.
ಯಾವುದೇ ಮಹಾಪುರುಷರನ್ನ ಒಂದೊಂದು ಸಮುದಾಯಕ್ಕೆ ಸೀಮಿತ ಮಾಡುವ ಕ್ರಿಯೆ ಒಳ್ಳೆಯದಲ್ಲ ,ಈ ಮಹಾನ್ ಪುರುಷರು ಯಾವುದೇ ಒಂದು ಜಾತಿ ವರ್ಗ ಸಮುದಾಯಕ್ಕೆ ಸೇರಿದವರಲ್ಲ ,ಅವರು ಇಡೀ ಪ್ರಪಂಚಕ್ಕೆ ಸನ್ಮಾರ್ಗ ಬೋಧಿಸಿದವರು ಎಂದು ಸಚಿವ ಶಿವರಾಜ ತಂಗಡಗಿ ತಿಳಿಸಿದರು.
ಭಾರತೀಯ ಬೌದ್ಧ ಮಹಾಸಭಾದ ಬೋಧಿದತ್ತ ಭಂತೇಜಿ ಅವರು ದಿವ್ಯ ಸಾನಿಧ್ಯ ವಹಿಸಿದ್ದರು. ದಕ್ಷಿಣ ಭಾರತ ಬುದ್ಧ ಸಂಘದ ತಸುತೇಸಮ್ಮ ಜಥೋನೋ ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಜೆ.ಮಂಜುನಾಥ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಡಾ. ಬಿ ಎಸ್ ಮಂಜುನಾಥ ಸ್ವಾಮಿ, ನಾಗಸೇನ ಬುದ್ಧ ವಿಹಾರದ ಅಧ್ಯಕ್ಷ ಡಾ. ಎಂ ವೆಂಕಟಸ್ವಾಮಿ, ಸಾಮಾಜಿಕ ಹೋರಾಟಗಾರ ಎನ್.ಮೂರ್ತಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಡಾ.ವಡ್ಡಗೆರೆ ನಾಗರಾಜಯ್ಯ ಹಾಗೂ ಪ್ರೊ.ಎಂ.ವಿ.ಉಷಾದೇವಿ ಅವರು ಭಗವಾನ್ ಬುದ್ಧರನ್ನು ಕುರಿತಂತೆ ಉಪನ್ಯಾಸ ನೀಡಿದರು. ಇಲಾಖೆಯ ಜಂಟಿ ನಿರ್ದೇಶಕರಾದ ಬಲವಂತರಾವ್ ಪಾಟೀಲ್ ಹಾಗೂ ಅಶೋಕ್ ಚಲವಾದಿ ಹಾಜರಿದ್ದರು.
ವಿವಿಧ ಬೌದ್ಧ ಸಂಘಗಳ ಪ್ರತಿನಿಧಿಗಳು ಹಾಗೂ ಮುಂಡಗೋಡಿನ ಬೌದ್ಧ ಭಿಕ್ಕುಗಳು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.






