ವರ್ತುಲ ಅರ್ಥವ್ಯವಸ್ಥೆ ಆರ್ಥಿಕತೆಗೆ ಪರ್ಯಾಯ ಆಗಬಲ್ಲದು : ಪಿ.ಎಂ.ನರೇಂದ್ರಸ್ವಾಮಿ

ಬೆಂಗಳೂರು : ತ್ಯಾಜ್ಯವನ್ನೂ ಬೆಲೆಬಾಳುವ ಸಂಪನ್ಮೂಲವನ್ನಾಗಿ ಪರಿವರ್ತಿಸಬಹುದು. ಆದುದರಿಂದ ವರ್ತುಲ ಅರ್ಥವ್ಯವಸ್ಥೆ ಭವಿಷ್ಯದಲ್ಲಿ ನಮ್ಮ ಆರ್ಥಿಕತೆಗೆ ಪರ್ಯಾಯ ಆಗಬಲ್ಲದು ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವದ ಹಿನ್ನೆಲೆಯಲ್ಲಿ ನಡೆದ ‘ವರ್ತುಲ ಅರ್ಥವ್ಯವಸ್ಥೆ ಮತ್ತು ಸ್ಥಿರತೆ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ವರ್ತುಲ ಅರ್ಥವ್ಯವಸ್ಥೆ ಮತ್ತು ಸ್ಥಿರತೆ ಎನ್ನುವುದು ಕೇವಲ ಅವಶ್ಯಕತೆಯಲ್ಲ. ಹವಾಮಾನ ಬದಲಾವಣೆ, ಜೀವ ವೈವಿಧ್ಯತೆಯ ನಾಶ ಹಾಗೂ ತ್ಯಾಜ್ಯ ನಿರ್ವಹಣೆ ಮುಂತಾದ ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ಗೇಮ್ ಚೇಂಜರ್ ಎಂದರು.
ವರ್ತುಲ ಅರ್ಥವ್ಯವಸ್ಥೆ ಇಂದಿನ ‘ಕೊಳ್ಳಿ–ಬಳಸಿ–ಬಿಸಾಡಿ’ ಎಂಬ ಧೋರಣೆಯ ಆರ್ಥಿಕತೆಗೆ ಪರ್ಯಾಯವಾದ ಮತ್ತು ಅವಶ್ಯಕವಾದ ಆರ್ಥಿಕ ಮಾದರಿಯಾಗಿದೆ. ವರ್ತುಲ ಅರ್ಥವ್ಯವಸ್ಥೆ ಕಲ್ಪನೆಯಲ್ಲಿ ಉತ್ಪನ್ನಗಳನ್ನು ದೀರ್ಘಾವಧಿಗೆ ಬಳಸುವಂತೆ, ಮರುಬಳಕೆ ಹಾಗೂ ಮರುಸಂಸ್ಕರಣೆಗೆ ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗುತ್ತದೆ. ಇದರಿಂದ ಕಡಿಮೆ ಪ್ರಮಾಣದ ತ್ಯಾಜ್ಯ ಉತ್ಪಾದನೆಯಾಗುತ್ತದೆ. ಕೈಗಾರಿಕಾ ವಲಯಗಳು ಈ ಮಾದರಿಯನ್ನು ಅಳವಡಿಸಿಕೊಂಡರೆ, ಸಂಪನ್ಮೂಲ ಸಂರಕ್ಷಣೆಗೆ ಮಹತ್ವದ ಕೊಡುಗೆ ಕೊಟ್ಟಂತಾಗುತ್ತದೆ ಎಂದು ನರೇಂದ್ರಸ್ವಾಮಿ ವಿವರಿಸಿದರು.
ರಾಜ್ಯ ಭದ್ರವಾದ ಕೈಗಾರಿಕಾ ನೆಲೆಗಟ್ಟನ್ನು ಹೊಂದಿದೆ. ನವೀನ ಪರಿಕಲ್ಪನೆಯ ಸ್ಟಾರ್ಟ್ ಅಪ್‍ಗಳ ತಾಣವಾಗಿ ಮಾರ್ಪಟ್ಟಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನದೇ ಆದ ಇತಿಹಾಸದೊಂದಿಗೆ ಮುಂಚೂಣಿಯಲ್ಲಿದೆ. ನವೀಕರಿಸಬಹುದಾದ ಇಂಧನದಿಂದ ಹಿಡಿದು ಇ-ತ್ಯಾಜ್ಯ ಮರುಸಂಸ್ಕರಣೆ, ಸುಸ್ಥಿರ ನಗರ ಅಭಿವೃದ್ಧಿ ಯೋಜನೆ ಮತ್ತಿತರ ಕ್ಷೇತ್ರಗಳಲ್ಲಿ ತ್ವರಿತವಾಗಿ ಸ್ಪಂದಿಸುವ ಶಕ್ತಿಯನ್ನು ಹೊಂದಿದೆ ಎಂದು ಅವರು ಹೇಳಿದರು.
ಕೆಎಸ್‍ಪಿಸಿಬಿಯ ಪಾತ್ರ ಈಗ ಮಾಲಿನ್ಯದ ನಿಯಂತ್ರಣದ ಅನುಷ್ಠಾನಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಾವಣೆಯಲ್ಲಿ ಪಾಲುದಾರರಾಗಲು ಸಿದ್ಧರಾಗಿದ್ದು, ವರ್ತುಲ ಅರ್ಥವ್ಯವಸ್ಥೆಯನ್ನು ಆಧರಿಸಿದ ವ್ಯವಹಾರ ಮಾದರಿಗಳಿಗೆ ಬೆಂಬಲ ನೀಡುವುದು, ಸರಕಾರ–ಕೈಗಾರಿಕೆ–ಅಕಾಡೆಮಿಗಳ ನಡುವಿನ ಸಹಕಾರ ಹೆಚ್ಚಿಸುವುದು ಮತ್ತು ಪರಿಸರ ಸಂರಕ್ಷಣೆಯನ್ನು ಆರ್ಥಿಕ ಬೆಳವಣಿಗೆಯೊಂದಿಗೆ ಜೋಡಿಸುವ ಕಾರ್ಯದಲ್ಲಿ ಮುನ್ನೆಡೆಯಲು ಸಿದ್ಧವಾಗಿದೆ ಎಂದು ನರೇಂದ್ರಸ್ವಾಮಿ ತಿಳಿಸಿದರು.
ಸುಸ್ಥಿರತೆಯನ್ನು ಉತ್ತಮ ನೀತಿಗಳಿಂದ ಮಾತ್ರ ಜಾರಿ ಮಾಡಲು ಸಾಧ್ಯವಿಲ್ಲ. ಸಾರ್ವಜನಿಕರ ಮನಸ್ಥಿತಿ ಬದಲಾಗಬೇಕಾದುದು ಅತ್ಯಗತ್ಯ. ಬಳಕೆಯ ನಂತರ ಉಳಿಸಲು, ಬಿಸಾಡುವುದರ ಬದಲು ಮರುಬಳಕೆ ಮಾಡಲು ಬದ್ಧರಾಗಬೇಕಾಗಿದೆ. ಈ ಪರಿವರ್ತನೆಯಲ್ಲಿ ಪ್ರತಿಯೊಬ್ಬ ನಾಗರಿಕ, ಪ್ರತಿಯೊಬ್ಬ ಉದ್ಯಮಿ, ಪ್ರತಿಯೊಬ್ಬ ಆಡಳಿತಗಾರ, ನೀತಿ ನಿರೂಪಕ ತಮ್ಮ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕಿದೆ ಎಂದು ನರೇಂದ್ರಸ್ವಾಮಿ ಕರೆ ನೀಡಿದರು.
ಈ ವೇಳೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಮಂಡಳಿಯ ಸದಸ್ಯ ಕಾರ್ಯದರ್ಶಿ ಆರ್.ಗೋಕುಲ್, ಸೇರಿದಂತೆ ವಿವಿಧ ರಾಜ್ಯಗಳ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರು, ಸದಸ್ಯ ಕಾರ್ಯದರ್ಶಿಗಳು ಮತ್ತು ವಿವಿಧ ವಲಯದ ಪ್ರತಿನಿಧಿಗಳು ಭಾಗವಹಿಸಿದ್ದರು.







