ಕೆಪಿಕೆಎಸ್ 127 ಕೋಟಿ ರೂ. ನೆಲಬಾಡಿಗೆ ಮನ್ನಾಗೆ ಸಿಎಂ ಜೊತೆ ಚರ್ಚೆ : ಪಿ.ಎಂ.ನರೇಂದ್ರಸ್ವಾಮಿ

ಪಿ.ಎಂ.ನರೇಂದ್ರ ಸ್ವಾಮಿ
ಬೆಂಗಳೂರು : ಕರ್ನಾಟಕ ಪ್ರದೇಶ ಕೃಷಿಕ ಸಮಾಜಕ್ಕೆ (ಕೆಪಿಕೆಎಸ್) ಲೋಕೋಪಯೋಗಿ ಇಲಾಖೆ ಕಳುಹಿಸಿರುವ 127 ಕೋಟಿ ರೂ. ನೆಲಬಾಡಿಗೆ ನೋಟಿಸ್ ಕುರಿತಂತೆ ಮುಖ್ಯಮಂತ್ರಿ ಜೊತೆ ಚರ್ಚಿಸಿ, ಬಾಡಿಗೆ ಮನ್ನಾ ಮಾಡಿಸಲು ಪ್ರಯತ್ನಿಸಲಾಗುವುದು ಎಂದು ಕೃಷಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ ಹೇಳಿದರು.
ಗುರುವಾರ ನಗರದ ಹಡ್ಸನ್ ವೃತ್ತದ ಬಳಿಯಿರುವ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಸಭಾಂಗಣದಲ್ಲಿ ನಡೆದ ಕೆಪಿಕೆಎಸ್ ರಾಜ್ಯಮಟ್ಟದ ಆಡಳಿತ ಮಂಡಳಿ ಸಭೆಯಲ್ಲಿ ಅವರು ಮಾತನಾಡಿದರು.
ಲೋಕೋಪಯೋಗಿ ಇಲಾಖೆಯು ನೆಲ ಬಾಡಿಗೆ ಬಾಕಿ ಪಾವತಿಸಲು ನೋಟಿಸ್ ನೀಡಿರುವ ವಿಚಾರ ಗಮನಕ್ಕೆ ಬಂದಿದೆ. ರೈತರ ಅಭ್ಯುದಯಕ್ಕಾಗಿ ಶ್ರಮಿಸುತ್ತಿರುವ ಸಂಸ್ಥೆಗೆ ಹಾಕಿರುವ ನೆಲ ಬಾಡಿಗೆಯನ್ನು ಮನ್ನಾ ಮಾಡುವಂತೆ ಕೋರಲಾಗುವುದು. ಸಾಧ್ಯವಾದರೆ, ಕೃಷಿಕ ಸಮಾಜದ ಎಲ್ಲ ಅಧ್ಯಕ್ಷರು ಹಾಗೂ ನಿರ್ದೇಶಕರ ನಿಯೋಗವನ್ನೂ ಸಿಎಂ ಬಳಿಗೆ ಕರೆದೊಯ್ಯಲಾಗುವುದು ಎಂದು ಅವರು ಭರವಸೆ ನೀಡಿದರು.
ಹೊಸ ಸದಸ್ಯತ್ವ ನೋಂದಣಿಗೆ ಅವಕಾಶ: ಹೊಸ ಸದಸ್ಯತ್ವ ನೋಂದಣಿಯನ್ನು 2023ರಿಂದ ಸ್ಥಗಿತಗೊಳಿಸಲಾಗಿದೆ. ಈಗ ಶುಲ್ಕ ಹೆಚ್ಚಳದೊಂದಿಗೆ ಹೊಸ ಸದಸ್ಯರ ಸೇರ್ಪಡೆಗೆ ಅವಕಾಶ ನೀಡಬೇಕು. ಇದರಿಂದ ಕೃಷಿಕ ಸಮಾಜದ ಆದಾಯವೂ ಹೆಚ್ಚಲಿದೆ ಎಂಬ ಪ್ರಸ್ತಾವವನ್ನು ಅವರು ನಿರ್ದೇಶಕರ ಅಭಿಪ್ರಾಯಕ್ಕೆ ಬಿಟ್ಟರು.
ನಿರ್ದೇಶಕ ಭತ್ತೆ ಹೆಚ್ಚಳ ಕುರಿತ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ನರೇಂದ್ರ ಸ್ವಾಮಿ, ರಾಜ್ಯದಲ್ಲಿ ಬರ ಇರುವುದರಿಂದ ತಾತ್ಕಾಲಿಕವಾಗಿ ಈ ಪ್ರಸ್ತಾಪವನ್ನು ಮುಂದೂಡಬೇಕು. 2027ರ ಮಾರ್ಚ್ ನಂತರ ಭತ್ತೆ ಹೆಚ್ಚಳದ ಕುರಿತು ನಿರ್ಧರಿಸುವುದಾಗಿ ಭರವಸೆ ನೀಡಿದರು.
ನಿವೇಶನ ನೀಡಲು ಮನವಿ: ಕೊಡಗು ಹಾಗೂ ಧಾರವಾಡ ಜಿಲ್ಲೆಯಲ್ಲಿ ಕೃಷಿಕ ಸಮಾಜಕ್ಕೆ ಇಲಾಖೆ ವತಿಯಿಂದ ನಿವೇಶನ ಕೊಡಬೇಕೆಂದು ಕೃಷಿಕ ಸಮಾಜದ ಜಿಲ್ಲಾಧ್ಯಕ್ಷರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬೆಂಗಳೂರಿನ ಜಿಕೆವಿಕೆಯ ಮುಕ್ಕಾಲು ಭಾಗ ಜಾಗವನ್ನು ಬೇರೆಯವರಿಗೆ ನೀಡಿರುವುದರಿಂದ ಮೂಲ ಉದ್ದೇಶವೇ ಹಾಳಾಗಿದೆ. ಯಾವುದೇ ಕೃಷಿ ವಿಶ್ವವಿದ್ಯಾಲಯಕ್ಕೆ ನೀಡಿರುವ ಜಾಗವನ್ನು ಅನ್ಯ ಉದ್ದೇಶಗಳಿಗೆ ಕೊಡುವಂತಿಲ್ಲ ಎಂದರು.
ಕೃಷಿ ಇಲಾಖೆಗೂ ಇದೇ ನಿಯಮ ಅನ್ವಯಿಸಲಿದೆ. ನಾನಂತೂ ಕೃಷಿ ಇಲಾಖೆಯ ಭೂಮಿಯನ್ನು ಅನ್ಯ ಉದ್ದೇಶಗಳಿಗೆ ನೀಡುವುದಿಲ್ಲ. ಅಗತ್ಯವೆನಿಸಿದರೆ ಸ್ಥಳೀಯ ನಗರಾಭಿವೃದ್ಧಿ ಪ್ರಾಧಿಕಾರದಿಂದ ಕೃಷಿಕ ಸಮಾಜಕ್ಕೆ ನಿವೇಶನ ಕೊಡಿಸುವ ವ್ಯವಸ್ಥೆ ಮಾಡುತ್ತೇನೆ ಎಂದು ಅವರು ಭರವಸೆ ನೀಡಿದರು.
ಈ ವೇಳೆ ಕಲಬುರಗಿ ಕೃಷಿಕ ಸಮಾಜದ ಅಧ್ಯಕ್ಷರು ಮಧ್ಯಪ್ರವೇಶಿಸಿ, ಕಲ್ಯಾಣ ಕರ್ನಾಟಕದ ತೊಗರಿಯು ಜಿಐ ಟ್ಯಾಗ್ ಹೊಂದಿದೆ. ಇಲ್ಲಿರುವ ಕೃಷಿ ವಿಜ್ಞಾನ ವಿವಿಯಲ್ಲಿ 500 ಎಕರೆ ಜಾಗವನ್ನು ಖಾಸಗಿ ಸಂಸ್ಥೆಯ ಆಸ್ಪತ್ರೆ ಕಟ್ಟಲು ನೀಡುವ ಬಗ್ಗೆ ಚರ್ಚೆಯಾಗುತ್ತಿದೆ ಎಂದಾಗ, ಅಂತಹ ಪ್ರಸ್ತಾವನೆಯನ್ನು ಪರಿಶೀಲಿಸುತ್ತೇನೆ ಎಂದರು.
ಯಾವುದೇ ಕಾರಣಕ್ಕೂ ಕೃಷಿ ಇಲಾಖೆ ಇರಬಹುದು, ವಿಶ್ವವಿದ್ಯಾಲಯವಿರಬಹುದು. ಒಂದಿಂಚೂ ಜಾಗ ನೀಡುವುದಿಲ್ಲ. ಸರಕಾರಿ ಜಾಗದಲ್ಲಿ ಇಲಾಖೆಗಳನ್ನು ಹೊರತುಪಡಿಸಿ ಅನ್ಯ ಸಂಸ್ಥೆ ಅಥವಾ ಉದ್ದೇಶಗಳಿಗೆ ಭೂಮಿ ನೀಡಬಾರದು ಎಂಬುದು ಸಂಪುಟದಲ್ಲೂ ನಿರ್ಧಾರವಾಗಿದೆ. ಹಾಗಾಗಿ ಯಾರಿಗೂ ನೀಡುವುದಿಲ್ಲ ಎಂದು ನರೇಂದ್ರ ಸ್ವಾಮಿ ಪುನರುಚ್ಚರಿಸಿದರು.
ಕೃಷಿಕ ಸಮಾಜದ ಪ್ರತಿನಿಧಿಗಳಿಗೂ ಕೆಡಿಪಿ ಸಭೆಗೆ ಅವಕಾಶ ನೀಡಬೇಕೆಂಬ ಸದಸ್ಯರ ಮನವಿಗೆ ಪ್ರತಿಕ್ರಿಯಿಸಿ, ಅದೇನಿದ್ದರೂ ಸಂಪುಟದ ತೀರ್ಮಾನ ಎಂದರು.
ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಕಾರ್ಯಕಾರಿ ಅಧ್ಯಕ್ಷ ನಗರದ ಮಹದೇವಪ್ಪ, ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಕಾರ್ಯದರ್ಶಿ ಜಿ.ಎಸ್. ಜಯಸ್ವಾಮಿ ಹಾಗೂ ಎಲ್ಲಾ ಜಿಲ್ಲೆಗಳ ಕೃಷಿಕ ಸಮಾಜದ ಅಧ್ಯಕ್ಷರು ಹಾಗೂ ನಿರ್ದೇಶಕರು ಭಾಗವಹಿಸಿದ್ದರು.






