ಪೊಲೀಸ್ ಕಾನ್‍ಸ್ಟೇಬಲ್ ನೇಮಕಾತಿ ಪರೀಕ್ಷೆ ಯಶಸ್ವಿ: ಶೇ.78ಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರು

ಬೆಂಗಳೂರು : ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್‍ಆರ್‍ಪಿ) ಪಡೆಯ ಕಾನ್‍ಸ್ಟೇಬಲ್ ಹುದ್ದೆಗಳ ಭರ್ತಿಗೆ ರವಿವಾರ(ಸೆ.20) ನಡೆದ ಲಿಖಿತ ಪರೀಕ್ಷೆಯು ಯಶಸ್ವಿಯಾಗಿ ಮುಕ್ತಾಯಗೊಂಡಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ತಿಳಿಸಿದೆ.
ಮಿಕ್ಕುಳಿಕೆ ವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದಗಳ ಒಟ್ಟು 2,314 ಹುದ್ದೆಗಳಿಗಾಗಿ ಈ ನೇಮಕಾತಿ ಪರೀಕ್ಷೆ ನಡೆಸಲಾಗಿದೆ. ಈ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಿಕ್ಕುಳಿಕೆ ವೃಂದದ ಒಟ್ಟು 1,42,912 ಅಭ್ಯರ್ಥಿಗಳ ಪೈಕಿ 1,12,125 ಅಂದರೆ ಶೇ.78ರಷ್ಟು ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅದೇ ರೀತಿ, ಕಲ್ಯಾಣ ಕರ್ನಾಟಕ ವೃಂದದ 38,332 ಪೈಕಿ 32,694 ಅಂದರೆ ಶೇ.85ರಷ್ಟು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎಂದು ಕೆಇಎ ಮಾಹಿತಿ ನೀಡಿದೆ.
ಮಿಕ್ಕುಳಿದ ವೃಂದದ ಪರೀಕ್ಷೆಯು ಬೆಂಗಳೂರು ಸೇರಿದಂತೆ ಎಂಟು ಜಿಲ್ಲೆಗಳ ಒಟ್ಟು 333 ಕೇಂದ್ರಗಳಲ್ಲಿ ಬೆಳಗ್ಗೆ 10:30ಕ್ಕೆ ನಡೆದಿದೆ. ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ನಿಗದಿಯಾಗಿದ್ದ ಪರೀಕ್ಷೆಯು ನಾಲ್ಕು ಜಿಲ್ಲೆಗಳ 85 ಪರೀಕ್ಷಾ ಕೇಂದ್ರಗಳಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆದಿದೆ ಎಂದು ಕೆಇಎ ತಿಳಿಸಿದೆ.
ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ರೀತಿಯ ಅಕ್ರಮ ಅಥವಾ ಲೋಪಗಳು ನಡೆಯದಂತೆ ತೀವ್ರ ನಿಗಾ ವಹಿಸಲು ಕೆಇಎ ಕಚೇರಿಯಲ್ಲಿ ವಿಶೇಷ ಕಮಾಂಡ್ ಸೆಂಟರ್ ಸ್ಥಾಪಿಸಲಾಗಿತ್ತು. ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಹಾಗೂ ಆಡಳಿತಾಧಿಕಾರಿ ಇಸ್ಲಾವುದ್ದೀನ್ ಗದ್ಯಾಳ ಅವರು ಕಮಾಂಡ್ ಸೆಂಟರ್‍ನಲ್ಲಿ ಖುದ್ದು ಉಪಸ್ಥಿತರಿದ್ದು, ಪರೀಕ್ಷಾ ಪ್ರಕ್ರಿಯೆಗಳ ಮೇಲೆ ನಿರಂತರ ನಿಗಾ ವಹಿಸಿದ್ದರು.






