ಯತ್ನಾಳ್, ಪ್ರತಾಪ್ ಸಿಂಹ ಬಿಜೆಪಿ ಪಕ್ಷ ಕಿತ್ತು ಹಾಕಿರುವ ಪೈರುಗಳು ಹೊರತು ಫೈರ್ ಬ್ರಾಂಡ್ ಅಲ್ಲ : ಪ್ರದೀಪ್ ಈಶ್ವರ್

ಬೆಂಗಳೂರು, ಸೆ.10: ಒಂದು ಹಿಂದೂ ದೇವಾಲಯದಲ್ಲಿ ಕುಳಿತುಕೊಂಡು ಬಹಿರಂಗ ಚರ್ಚೆ ನಡೆಸುತ್ತೇನೆ. ನಿಮಗೆ ಹಿಂದೂ ಧರ್ಮದ ಬಗ್ಗೆ ಜ್ಞಾನ ಇದ್ದರೆ ಬನ್ನಿ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಂಸದ ಪ್ರತಾಪ್ ಸಿಂಹಗೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಪಂಥಾಹ್ವಾನ ನೀಡಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಬಿಜೆಪಿ ಪಕ್ಷವೂ ಕಿತ್ತು ಹಾಕಿರುವ ಪೈರುಗಳು ಹೊರತು ಫೈರ್ ಬ್ರಾಂಡ್ ಅಲ್ಲ. ಅವರಿಗೆ ಧರ್ಮದ ಬಗ್ಗೆ ಕಳಾಜಿ, ಜ್ಞಾನ ಇದ್ದರೆ ಬಹಿರಂಗ ಚರ್ಚೆ ಸ್ವೀಕರ ಮಾಡಲಿ ಎಂದು ಹೇಳಿದರು.
ಗಣೇಶ ಹಬ್ಬ ಸಂದರ್ಭದಲ್ಲೇ ಯಾಕೆ ಹೀಗೆ ಆಗೋದು? ಕಾನೂನು ಸುವ್ಯವಸ್ಥೆ ನಿಯಂತ್ರಣ ಮಾಡುವಾಗಲೇ ಒಂದು ಕೋತಿ ಮೈಸೂರಿಂದ ಬರುತ್ತೆ ಇನ್ನೊಂದು ಕೋತಿ ವಿಜಯಪುರದಿಂದ ಬರುತ್ತೆ. ಮಾತಾಡಿದರೆ ಜೆಸಿಬಿ ಅಂತಾರೆ ಯೋಗಿ ಆದಿತ್ಯ ನಾಥ್ ಎನ್ನುತ್ತಾರೆ ಟೀಕಿಸಿದರು.
ಅಲ್ಲದೆ, ಕರ್ನಾಟಕದ ಬಿಜೆಪಿ ಪಕ್ಷದಿಂದ ಬಂದ ಮುಖ್ಯಮಂತ್ರಿಗಳು ಎಲ್ಲರೂ ಅಯೋಗ್ಯರು ಎಂದು ಹೇಳುವುದಾ?. ಬಿಜೆಪಿಯವರು ಹೀಗೆ ಮಾಡಿದರೆ ಅವರ ಮೇಲೆ ಕ್ರಮ ಮಾತ್ರವಲ್ಲದೆ, ಒದ್ದು ಒಳಗೆ ಹಾಕುತ್ತೇವೆ ಎಂದು ವಾಗ್ದಾಳಿ ನಡೆಸಿದರು.
ಮಂಡ್ಯದ ಮದ್ದೂರಿನಲ್ಲಿ ಕಲ್ಲು ತೂರಾಟ ಮಾಡಿದವರ ಮೇಲೆ ಸೂಕ್ತ ಕ್ರಮ ತಗೆದುಕೊಳ್ಳುತ್ತೇವೆ. ಅವರನ್ನು ಸಮರ್ಥನೆ ಮಾಡುತ್ತಿಲ್ಲ. ಆದರೆ ಇವರು ಬೆಂಕಿ ಹಚ್ಚುತ್ತಿದ್ದಾರೆ. ಅದರ ಬಗ್ಗೆ ನಮಗೆ ಬೇಜಾರು ಅಷ್ಟೇ ಎಂದರು.







