ವಿಪಕ್ಷಗಳ ವಿರುದ್ಧ ಸದನದಲ್ಲಿ ಪ್ರದೀಪ್ ಈಶ್ವರ್ ಆಕ್ರೋಶ

ಬೆಂಗಳೂರು : ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಸದಸ್ಯರೇ ಸ್ಪೀಕರ್ ಪೀಠದ ಮುಂದಿನ ಬಾವಿಯತ್ತ ಧಾವಿಸಿ ಪ್ರತಿಪಕ್ಷಗಳ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದ ಘಟನೆ ವಿಧಾನಸಭೆಯಲ್ಲಿ ನಡೆಯಿತು.
ಗುರುವಾರ ವಿಧಾನಸಭೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು, ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ತಮ್ಮ ಆಸನದಲ್ಲೇ ಎದ್ದುನಿಂತು ಧಿಕ್ಕಾರದ ಘೋಷಣೆಗಳನ್ನು ಕೂಗುತ್ತಿದ್ದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸದಸ್ಯ ಪ್ರದೀಪ್ ಈಶ್ವರ್ ಸ್ಪೀಕರ್ ಮುಂದಿನ ಬಾವಿಯ ಅಂಚಿನವರೆಗೂ ಧಾವಿಸಿ ಪ್ರತಿಯಾಗಿ ಘೋಷಣೆಗಳನ್ನು ಕೂಗಿದರು.
ಬಿಜೆಪಿ ಸದಸ್ಯರು, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಘೋಷಣೆಗಳನ್ನು ಕೂಗುತ್ತಿದ್ದರು. ಇದಕ್ಕೆ ಪ್ರತಿಯಾಗಿ ಪ್ರದೀಪ್ ಈಶ್ವರ್ ಬಿಜೆಪಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ಅಲ್ಲದೆ, ರಾಹುಲ್ ಗಾಂಧಿಗೆ ಜೈಕಾರವನ್ನು ಹಾಕಿದರು. ಪ್ರದೀಪ್ ಈಶ್ವರ್ ನಡೆಗೆ ವಿಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಈ ವೇಳೆ ಕಾಂಗ್ರೆಸ್ ಸದಸ್ಯ ಗಣಿಗ ರವಿಕುಮಾರ್, ಪ್ರದೀಪ್ ಈಶ್ವರ್ ಬಳಿ ಬಂದು ಅವರನ್ನು ವಾಪಸ್ ಕರೆದುಕೊಂಡು ಹೋಗಲು ಪ್ರಯತ್ನಿಸಿದರು. ಆದರೆ, ಪ್ರದೀಪ್ ಈಶ್ವರ್ ತಮ್ಮ ಘೋಷಣೆಗಳನ್ನು ಮುಂದುವರಿಸಿದರು. ಇದರಿಂದ ಸದನದಲ್ಲಿ ಕೆಲಕಾಲ ವಿಲಕ್ಷಣ ವಾತಾವರಣ ನಿರ್ಮಾಣವಾಯಿತು. ಬಳಿಕ ಚಿಕ್ಕಬಳ್ಳಾಪುರ ಉಸ್ತುವಾರಿ ಸಚಿವ ಭೈರತಿ ಸುರೇಶ್, ಪ್ರದೀಪ್ ಈಶ್ವರ್ ಸಮಾಧಾನಪಡಿಸಿ ತಮ್ಮ ಸ್ಥಾನಕ್ಕೆ ತೆರಳುವಂತೆ ಮನವೊಲಿಸಿದ ಪ್ರಸಂಗ ನಡೆಯಿತು.






