‘ವಿಬಿ-ಜಿ ರಾಮ್ ಜಿ’ ವಿರುದ್ಧ ಯಾವ ಪುರುಷಾರ್ಥಕ್ಕಾಗಿ ಹೋರಾಟ : ಪ್ರಹ್ಲಾದ್ ಜೋಶಿ

ಬೆಂಗಳೂರು : ಕಾಂಗ್ರೆಸ್ಸಿನವರು ಯಾವ ಪುರುಷಾರ್ಥಕ್ಕಾಗಿ ಮತ್ತು ಯಾವ ನೈತಿಕತೆ ಇಟ್ಟುಕೊಂಡು ವಿಬಿ-ಜಿ ರಾಮ್ ಜಿ ವಿರುದ್ಧ ಹೋರಾಟಕ್ಕೆ ಕರೆ ನೀಡಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ.
ಗುರುವಾರ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಿಕಸಿತ ಭಾರತ ಉದ್ಯೋಗ ಖಾತ್ರಿ ಮತ್ತು ಜೀವನೋಪಾಯ ಮಿಷನ್(ವಿಬಿ-ಜಿ ರಾಮ್ ಜಿ) ಇದರ ಬಗ್ಗೆ ಕಾಂಗ್ರೆಸ್ ಜ.10ರಿಂದ ಹೋರಾಟಕ್ಕೆ ಕರೆ ನೀಡಿದೆ. 20 ವರ್ಷಗಳ ಹಿಂದೆ ಯೋಜನೆ ಮಾಡಿದಾಗ ವಿಕಸಿತ ಭಾರತ, ಆಸ್ತಿ ನಿರ್ಮಾಣದ ಕಲ್ಪನೆಯೇ ಇರಲಿಲ್ಲ. ಆಗ, ದೇಶ-ಜನರ ಆರ್ಥಿಕ ಸ್ಥಿತಿ ಕಠಿಣವಾಗಿತ್ತು ಎಂದರು.
ವಿಕಸಿತ ಭಾರತ ಆದಾಗ ಮೂಲಭೂತ ಸೌಕರ್ಯ, ದೀರ್ಘಾವಧಿಯ ಆಸ್ತಿಗಳಿರುವ ವಿಕಸಿತ ಗ್ರಾಮವೂ ಆಗದೇ ಇದ್ದಲ್ಲಿ ದೊಡ್ಡ ಪ್ರಮಾಣದಲ್ಲಿ ಹಳ್ಳಿಗಳು ಖಾಲಿ ಆಗಲಿವೆ ಎಂಬ ಮಹತ್ವದ ಅಂಶವೂ ಇದರಲ್ಲಿದೆ ಎಂದು ತಿಳಿಸಿದರು. ಕಾಲಕಾಲಕ್ಕೆ ಈ ಯೋಜನೆಯಡಿ ಬದಲಾವಣೆಗಳನ್ನು ಅವರೂ ಮಾಡಿದ್ದಾರೆ ಎಂದು ಹೇಳಿದರು.
ಗ್ರಾಮೀಣ ಜನರ ಉದ್ಯೋಗದ ಹಕ್ಕನ್ನು ಇದು ಕಸಿಯಲಿದೆ ಎಂಬ ಸುಳ್ಳನ್ನು ಅವರು ಹೇಳುತ್ತಿದ್ದಾರೆ. ಇದು ಶುದ್ಧಾಂಗ ಸುಳ್ಳು. ಇದು ಯಾವುದೇ ರೀತಿಯ ಕೇಂದ್ರದ ಯೋಜನೆ ಅಥವಾ ಕೇಂದ್ರ ಪ್ರಾಯೋಜಿತ ಯೋಜನೆ ಮಾಡಲು ಕಾನೂನಿನ ಅಗತ್ಯವಿಲ್ಲ. ವಿಬಿ-ಜಿ ರಾಮ್ ಜಿ ಎಂಬುದು ಸಂಸತ್ತಿನ ಕಾಯ್ದೆ ಎಂದು ತಿಳಿಸಿದರು. ಇದು ಕೆಲಸದ ಹಕ್ಕನ್ನು ಕಸಿಯುವುದಿಲ್ಲ, ಇದನ್ನು 125 ದಿನಕ್ಕೆ ಏರಿಸಿದ್ದೇವೆ ಎಂದು ಅವರು ಹೇಳಿದರು.
ದುಡ್ಡು ತಿನ್ನುವ ವ್ಯವಸ್ಥೆ: ಹಿಂದೆ ಒಂದು ಪೈಸೆಯನ್ನೂ ರಾಜ್ಯ ಸರಕಾರ ಕೊಡುತ್ತಿರಲಿಲ್ಲ, ಮನ ಬಂದಂತೆ ಕೆಲಸ ಮಾಡಿ ಕೇಂದ್ರ ಸರಕಾರದ ದುಡ್ಡು ತಿನ್ನುವ ವ್ಯವಸ್ಥೆ ಇದರಲ್ಲಿ ಇತ್ತು. ಗುರಿ ತಲುಪದ ಅಧಿಕಾರಿಗಳ ಮೇಲೆ ಕ್ರಮ ಆಗುತ್ತಿದ್ದುದು ನಿಮಗೂ ತಿಳಿದಿದೆ ಎಂದು ನುಡಿದರು. ಈಚೆಗೆ ನೇರ ಕೂಲಿ ಪಾವತಿ ಆಗುತ್ತಿದ್ದರೂ, ಮೇಲ್ವಿಚಾರಣಾ ವ್ಯವಸ್ಥೆ ಇರಲಿಲ್ಲ. ಆ ಮೇಲ್ವಿಚಾರಣಾ ವ್ಯವಸ್ಥೆ ಮೂಲಕ ಕೇಂದ್ರೀಕೃತ ಪಾವತಿ ಮಾಡಿ ಎಲ್ಲ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನವನ್ನು ಮಾಡಲಾಗಿದೆ ಎಂದು ವಿವರಿಸಿದರು.







