ಸರಕಾರಿ ಜಾಹೀರಾತಿನಲ್ಲಿ ಡಿಸಿಎಂ ಡಾ.ಪರಮೇಶ್ವರ್ ಫೋಟೋ ಮಾಯ, ಏನಾಯಿತು ಕಾಂಗ್ರೆಸ್‍ನ ಅಹಿಂದ ಜಪ : ಪ್ರಹ್ಲಾದ್ ಜೋಶಿ

ಬೆಂಗಳೂರು : ‘ಅಹಿಂದ' ಮಂತ್ರ ಜಪಿಸುತ್ತಿದ್ದ ಕಾಂಗ್ರೆಸ್ ಇದೀಗ ಅದಕ್ಕೆ ತದ್ವಿರುದ್ಧವಾಗಿ ವರ್ತಿಸುತ್ತಿದೆ. ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯವನ್ನು ಕಡೆಗಣಿಸುವ ಮತ್ತು ಅದೇ ‘ದಲಿತ ವಿರೋಧಿ ನೀತಿ' ಮುಂದುವರಿಸಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕಿಸಿದ್ದಾರೆ.
ರವಿವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ರಾಜ್ಯ ಸರಕಾರದ ಅಧಿಕೃತ ಜಾಹೀರಾತುಗಳಲ್ಲಿ ಹಿರಿಯ ದಲಿತ ನಾಯಕ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಹೆಸರು ಕೈಬಿಡುವ ಮೂಲಕ ಕಾಂಗ್ರೆಸ್ ಸರಕಾರವು ದಲಿತ ನಾಯಕರನ್ನು ಅಪಮಾನಿಸುವ ಸಂಸ್ಕೃತಿಯನ್ನು ಪ್ರದರ್ಶಿಸಿದೆ ಎಂದು ಆರೋಪಿಸಿದ್ದಾರೆ.
ಅಹಿಂದ ಸಿದ್ಧಾಂತದಡಿ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ದಲಿತರ ಪರ ಹೋರಾಡುವುದಾಗಿ ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷ ಸದಾ ಈ ಸಮುದಾಯಗಳ ನಾಯಕರನ್ನು ನಿರ್ಲಕ್ಷಿಸುತ್ತಲೇ ಬಂದಿದೆ. ರಾಜ್ಯ ಸರಕಾರ ಮತ್ತು ಸಿಎಂ ಡಿ.ಕೆ.ಶಿವಕುಮಾರ್ ಪದೇ ಪದೇ ದಲಿತ, ಅಹಿಂದ ನಾಯಕರನ್ನು ಕಡೆಗಣಿಸುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
‘ಹಸಿರು ಬೆಂಗಳೂರು’ ಉಪಕ್ರಮವನ್ನು ಉತ್ತೇಜಿಸುವ ಇತ್ತೀಚಿನ ಸರಕಾರಿ ಜಾಹೀರಾತಿನಿಂದಲೂ ಉಪಮುಖ್ಯಮಂತ್ರಿ ಅವರನ್ನು ಹೊರಗಿಡಲಾಗಿದೆ. ಆದರೆ, ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಕೃಷ್ಣ ಭೈರೇಗೌಡ ಅವರಿನ್ನೂ ವಹಿಸಿಕೊಳ್ಳದೇ ಇದ್ದರೂ ಜಾಹೀರಾತುಗಳಲ್ಲಿ ‘ಬೆಂಗಳೂರು ನಗರಾಭಿವೃದ್ಧಿ ಸಚಿವ’ರಾಗಿ ತೋರಿಸಲಾಗಿದೆ. ಸರಕಾರದ ಈ ವ್ಯತಿರಿಕ್ತ ನಿಲುವು ಏನನ್ನು ತೋರುತ್ತದೆ? ಎಂದು ಜೋಶಿ ಪ್ರಶ್ನಿಸಿದ್ದಾರೆ.
ಈ ಹಿಂದೆ ಡಾ.ಬಿ.ಆರ್.ಅಂಬೇಡ್ಕರ್, ಬಾಬುಜಗಜೀವನ್ ರಾಮ್ ಮತ್ತು ಸೀತಾರಾಮ್ ಕೇಸರಿ ಅವರಂತಹ ನಾಯಕರಿಗೆ ಅಗೌರವ ತೋರಿದ್ದ ಕಾಂಗ್ರೆಸ್, ಇದೀಗ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ ಮತ್ತು ಡಾ.ಜಿ.ಪರಮೇಶ್ವರ್ ಅವರನ್ನು ಡಿಸಿಎಂ ಮಾಡಿತು. ಸರಕಾರಿ ಜಾಹೀರಾತಿನಲ್ಲಿ ಕಡೆಗಣಿಸುತ್ತಿದ್ದು, ಹಳೇ ರಾಜಕೀಯ ಚಳಿಯನ್ನೇ ಮುಂದುವರೆಸಿದೆ ಎಂದು ಜೋಶಿ ಆರೋಪಿಸಿದ್ದಾರೆ.
ಸಿದ್ದರಾಮಯ್ಯ ಅವರ ಅವಧಿಯಲ್ಲಿ ಡಿಸಿಎಂ ಫೋಟೋವನ್ನು ಸರಕಾರಿ ಜಾಹೀರಾತುಗಳಲ್ಲಿ ನಿಯಮಿತವಾಗಿ ಸೇರಿಸಲಾಗುತ್ತಿತ್ತು. ಆದರೆ, ಡಿ.ಕೆ.ಶಿವಕುಮಾರ ಆಡಳಿತ ಅದಕ್ಕೆ ತದ್ವಿರುದ್ಧವಾಗಿದೆ. ಉದ್ದೇಶಪೂರ್ವಕವಾಗಿ ಡಾ.ಪರಮೇಶ್ವರ್ ಅವರನ್ನು ಹೊರಗಿಟ್ಟಂತಿದೆ. ಇದು ಸಮಗ್ರ ಪ್ರಾತಿನಿಧ್ಯವನ್ನು ಪ್ರಶ್ನಿಸುವಂತಿದೆ ಎಂದು ಜೋಶಿ ಕಿಡಿಕಾರಿದ್ದಾರೆ.






