ಕೆಪಿಎಸ್ಸಿ ಕರ್ಮಕಾಂಡದ ಬಗ್ಗೆ ಏಕೆ ಧ್ವನಿ ಎತ್ತಲಿಲ್ಲ ರಾಹುಲ್ ಗಾಂಧಿ? : ಪ್ರಹ್ಲಾದ್ ಜೋಶಿ

ಹೊಸದಿಲ್ಲಿ : ‘ನೀಟ್ ಪರೀಕ್ಷೆಯ ಬಗ್ಗೆ ಧ್ವನಿ ಎತ್ತುತ್ತಿರುವ ರಾಹುಲ್ ಗಾಂಧಿ, ಕರ್ನಾಟಕದ ಕೆಪಿಎಸ್ಸಿ ಕರ್ಮಕಾಂಡ ಬಗ್ಗೆ ಏಕೆ ಧ್ವನಿ ಅಡಗಿಸಿದ್ದಾರೆ?, ಇದೆಂತಹ ದ್ವಿಮುಖ ನೀತಿ?’ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಾಗ್ದಾಳಿ ನಡೆಸಿದರು.
ಗುರುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ವಿಪಕ್ಷಗಳು ರಾಷ್ಟ್ರೀಯ ಪರೀಕ್ಷೆ ವಿಷಯದಲ್ಲಿ ರಾಜಕೀಯ ಮಾಡುತ್ತಿವೆ. ನೀಟ್ ವಿವಾದ ಕುರಿತು ಸಂಸತ್ತಿನಲ್ಲಿ ಮುಕ್ತ ಹಾಗೂ ಸತ್ಯಾಧಾರಿತ ಚರ್ಚೆಗೆ ಕೇಂದ್ರ ಸರಕಾರ ಸಿದ್ಧವಿದೆ. ಇದಕ್ಕೆ ಅಖಿಲೇಶ್ ಯಾದವ್ ಸೇರಿದಂತೆ ಹಲವು ವಿಪಕ್ಷ ನಾಯಕರೂ ಸಮ್ಮತಿಸಿದ್ದಾರೆ. ಆದರೆ ಒಬ್ಬರ ಅಹಂಕಾರದಿಂದಾಗಿ ಚರ್ಚೆ ಸಾಧ್ಯವಾಗುತ್ತಿಲ್ಲ ಎಂದು ದೂರಿದರು.
ಕೇಂದ್ರದಲ್ಲಿ ರಾದ್ಧಾಂತ ಮಾಡುವ ವಿಪಕ್ಷ ನಾಯಕ ರಾಹುಲ್ ಗಾಂಧಿ, ತಮ್ಮದೇ ಆಡಳಿತವಿರುವ ಕರ್ನಾಟಕದಲ್ಲಿ ಕೆಪಿಎಸ್ಸಿ ಕರ್ಮಕಾಂಡ ಬಗ್ಗೆ ಏಕೆ ಧ್ವನಿ ಎತ್ತುತ್ತಿಲ್ಲ?. ಕರ್ನಾಟಕದಲ್ಲಿ 2.7 ಲಕ್ಷ ಸರಕಾರಿ ಹುದ್ದೆಗಳು ಖಾಲಿಯಿವೆ. ಕೆಪಿಎಸ್‍ಸಿ ಅಧ್ಯಕ್ಷರ ಮೇಲೆ ಭ್ರಷ್ಟಾಚಾರದ ಆರೋಪಗಳಿವೆ. ಅಲ್ಲಿಯೂ ಪ್ರತಿಭಟನೆಗಿಳಿದ ಪರೀಕ್ಷಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ಮಾಡಲಾಗಿದೆ ಹಾಗಿದ್ದರೂ ರಾಹುಲ್ ಅದೇಕೆ ಮೌನ ವಹಿಸಿದ್ದರು ಎಂದು ದೂರಿದರು.
ಕಠಿಣ ಕ್ರಮ: ನೀಟ್ ವಿಚಾರದಲ್ಲಿ ಕೇಂದ್ರ ಸರಕಾರ ನೆಪ ಹೇಳಿ ಜಾರಿಕೊಂಡಿಲ್ಲ. ವ್ಯವಸ್ಥೆ ಸುಧಾರಿಸಲು ಆದ್ಯತೆ ನೀಡಿದೆ. ನೀಟ್ ಪ್ರಕರಣದಲ್ಲಿ ಈಗಾಗಲೇ 14 ಜನರನ್ನು ಬಂಧಿಸಲಾಗಿದೆ. ಪರೀಕ್ಷಾ ಮಾಫಿಯಾಗೆ 10 ವರ್ಷ ಜೈಲು ಮತ್ತು ಭಾರೀ ದಂಡ ವಿಧಿಸುವ ಕಟ್ಟುನಿಟ್ಟಿನ ಕಾನೂನನ್ನು ಜಾರಿಗೆ ತಂದಿದೆ ಎಂದು ಜೋಶಿ ಸಮರ್ಥಿಸಿಕೊಂಡರು.
ಕೇಂದ್ರ ಬದ್ಧ: ಪ್ರಸ್ತುತ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಸಂಭವಿಸಿದೆ ಎಂದು ಗೊತ್ತಾಗುತ್ತಲೇ ಸರಕಾರ ಪರೀಕ್ಷೆಯನ್ನೆ ರದ್ದುಗೊಳಿಸಿತು. ನಂತರ ಅತ್ಯಂತ ಪಾರದರ್ಶಕ ರೀತಿಯಲ್ಲಿ ಮರು-ನೀಟ್ ಪರೀಕ್ಷೆ ನಡೆಸಿತು ಮತ್ತು ಫಲಿತಾಂಶ ತಕ್ಷಣವೇ ಘೋಷಿಸಲಾಯಿತು. ದೇಶದಲ್ಲಿ ಪರೀಕ್ಷಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು, ರಚನಾತ್ಮಕ ಸಲಹೆ ಕಾರ್ಯಗತಗೊಳಿಸಲು ಸರಕಾರ ಬದ್ಧವಾಗಿದೆ ಎಂದರು.






