ದೇವನಹಳ್ಳಿ ಭೂಸ್ವಾಧೀನ ವಿರೋಧಿ ಹೋರಾಟ | ಕಾನೂನು ತೊಡಕಿನ ಕುರಿತಷ್ಟೇ ಚರ್ಚೆಯಾಗಬೇಕು, ಪರಿಹಾರ ಹಣದ ಕುರಿತಲ್ಲ: ನಟ ಪ್ರಕಾಶ್ ರಾಜ್

ಬೆಂಗಳೂರು : ‘ದೇವನಹಳ್ಳಿ ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ನಾಳೆ(ಜು.15) ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಹಿಂದೆ ಕೊಟ್ಟ ಮಾತಿನಂತೆ ಕಾನೂನು ತೊಡಕುಗಳು ಮತ್ತು ಅದನ್ನು ನಿವಾರಿಸಿಕೊಳ್ಳುವುದು ಹೇಗೆ ಎಂಬುದಷ್ಟೇ ಚರ್ಚೆಯಾಗಬೇಕು, ಭೂಮಿಗೆ ಎಷ್ಟು ಮೊತ್ತದ ಪರಿಹಾರ ನೀಡಬೇಕೆಂಬ ಬಗ್ಗೆ ಅಲ್ಲ’ ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಹೇಳಿದ್ದಾರೆ.
ಸೋಮವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ‘ಎದ್ದೇಳು ಕರ್ನಾಟಕ’ದ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ವರ್ಷದ ಹಿಂದೆ ಇದೇ ಸಿದ್ದರಾಮಯ್ಯನವರು ವಿರೋಧ ಪಕ್ಷದಲ್ಲಿದ್ದಾಗ ಅಧಿಕಾರಕ್ಕೆ ಬಂದರೆ ರೈತರ ಬಲವಂತದ ಭೂ ಸ್ವಾಧೀನವನ್ನು ರದ್ದು ಮಾಡುತ್ತೇವೆ ಎಂದು ಹೇಳಿದ್ದರು. ಅಲ್ಲದೇ ಸದನದಲ್ಲಿಯೂ ದೊಡ್ಡಮಟ್ಟದಲ್ಲಿ ಧ್ವನಿ ಎತ್ತಿದ್ದರು. ಆದರೆ, ಇಂದು ಅವರ ಆಡಳಿತದಲ್ಲೇ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ ಎಂದರು.
ಜು.4ರಂದು ರೈತ ನಿಯೋಗದೊಂದಿಗೆ ಸಭೆ ನಡೆಸಿದ ಸಿದ್ದರಾಮಯ್ಯ ನಾವು ರೈತಪರ, ಆದರೆ ಕಾನೂನಿನ ತೊಡಕಿನ ಕುರಿತಾಗಿ ನಿರ್ಧಾರ ತೆಗೆದುಕೊಳ್ಳಲು ಜು.15ರ ತನಕ ಕಾಲಾವಕಾಶ ಕೇಳಿದ್ದರು. ಆನಂತರ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕೈಗಾರಿಕಾ ಸಚಿವರು, ದಿಲ್ಲಿಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್‍ರನ್ನು ಭೇಟಿ ಮಾಡಿ, ಡಿಫೆನ್ಸ್ ಕಾರಿಡಾರ್ ಮತ್ತು ಏರೋ ಸ್ಪೇಸ್ ಪಾರ್ಕ್ ಮಾಡಲು ಅನುಮತಿ ಕೇಳಿರುವುದು ಬೇಸರದ ಸಂಗತಿ ಎಂದು ಪ್ರಕಾಶ್ ರಾಜ್ ಹೇಳಿದರು.
ಕೆಲವು ರೈತರು ಭೂಮಿ ಕೊಡಲು ಸಿದ್ಧರಿದ್ದೀವಿ ಎಂದು ಹೇಳಿಕೊಂಡು ಸುದ್ದಿಗೋಷ್ಠಿ ನಡೆಸಿರುವುದು, ಎಂ.ಬಿ.ಪಾಟೀಲರ ವರ್ತನೆಗಳನ್ನು ಗಮನಿಸಿದಾಗ ಸರಕಾರ ರೈತರಲ್ಲಿ ಒಡಕು ಮೂಡಿಸಲು 10 ದಿನಗಳ ಕಾಲಾವಕಾಶ ತೆಗೆದುಕೊಂಡಿತೇ? ಎಂಬ ಅನುಮಾನ ಹುಟ್ಟಿದೆ. ಕಾನೂನಿನ ಪ್ರಕಾರ ಸರಕಾರಕ್ಕೆ ಅಂತಿಮ ಅಧಿಸೂಚನೆಯನ್ನು ಕೈಬಿಡಲು ಎಲ್ಲ ಅಧಿಕಾರವಿದೆ. ಸಿದ್ದರಾಮಯ್ಯನವರಿಗೆ ಇರುವ ಸಜ್ಜನಿಕೆ ಅವರ ಪಕ್ಷಕ್ಕೂ ಬರಬೇಕು ಎಂದು ಅವರು ತಿಳಿಸಿದರು.
ನಾಳೆ ಸರಕಾರ ತೆಗೆದುಕೊಳ್ಳುವ ನಿರ್ಧಾರವು ತಾನೂ ರೈತಪರವಾಗಿ ಇದೆಯೋ, ಅಥವಾ ಬಂಡವಾಳಶಾಹಿಗಳ ಪರವಿದೆಯೋ ಎಂಬುದು ತಿಳಿಯಲಿದೆ. ಇಲ್ಲಿಯವರೆಗೂ ರಾಜ್ಯದ ಯಾವೊಬ್ಬ ಶಾಸಕ, ಸಂಸದ ದೇವನಹಳ್ಳಿ ರೈತರ ಪರವಾಗಿ ಮಾತನಾಡಿಲ್ಲ. ವಿಪಕ್ಷಗಳ ಈ ಕುರಿತಾಗಿ ಚಕಾರ ಎತ್ತುತ್ತಿಲ್ಲ. ಕೃಷಿ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವ ಮುನ್ನ ಅಲ್ಲಿನ ಸಾಮಾಜಿಕ ಪರಿಣಾಮ, ಪುನರ್‍ವಸತಿ, ಆಹಾರ ಸುರಕ್ಷತೆ, ಪರಿಸರ ಮೇಲಿನ ಪರಿಣಾಮಗಳ ಕುರಿತು ಅಧ್ಯಯನ ನಡೆಯಬೇಕು. ಇದ್ಯಾವುದನ್ನು ಮಾಡದೆ ಕೃಷಿ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲು ಮುಂದಾಗಿರುವುದು ಸರಕಾರದ ರೌಡಿಸಂ ಅನ್ನು ತೋರ್ಪಡಿಸುತ್ತದೆ ಎಂದು ಪ್ರಕಾಶ್ ರಾಜ್ ಆತಂಕ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಎದ್ದೇಳು ಕರ್ನಾಟಕದ ಮುಖ್ಯಸ್ಥೆ ತಾರಾರಾವ್, ಎನ್.ವೆಂಕಟೇಶ್, ವೀರಸಂಗಯ್ಯ, ಬೋರಯ್ಯ, ಕೆ.ಎಲ್.ಅಶೋಕ್ ಉಪಸ್ಥಿತರಿದ್ದರು.
‘ಒಂದು ವೇಳೆ ನಾಳೆ(ಇಂದು) ಸಿದ್ದರಾಮಯ್ಯ ಕಂಪೆನಿ ಲಾಬಿಗೆ ಮಣಿದು ರೈತರಿಗೆ ನ್ಯಾಯ ನೀಡುವುದರಲ್ಲಿ ಹಿಂದೇಟು ಹಾಕಿದರೆ, ವಿಶ್ವಾಸದ ಈ ಕೊನೆಯ ತಂತು ಮುರಿದು ಬೀಳುತ್ತದೆ. ಸಿದ್ದರಾಮಯ್ಯರ ಜನಪರ ಇಮೇಜು ನುಚ್ಚುನುರಾಗುತ್ತದೆ. ಕಾಂಗ್ರೆಸ್ಸ್ ವಿರೋಧಿ ಹೋರಾಟದ ತೀಕ್ಷ್ಣ ಅಲೆ ರಾಜ್ಯವ್ಯಾಪಿ ಆವರಿಸುತ್ತದೆ. ರಾಷ್ಟ್ರಮಟ್ಟಕ್ಕೂ ವ್ಯಾಪಿಸುತ್ತದೆ. ಇದರ ಬಿಸಿ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರಿಗೂ ತಟ್ಟುತ್ತದೆ’
-ಕೆ.ಎಲ್.ಅಶೋಕ್, ಎದ್ದೇಳು ಕರ್ನಾಟಕ ಕಾರ್ಯಕಾರಿ ಸಮಿತಿ ಸದಸ್ಯ







