ಮಹಾತ್ಮಾಗಾಂಧಿ ವಸ್ತ್ರೋದ್ಯಮ ಕೋಶದ ಅಧ್ಯಕ್ಷ ಸ್ಥಾನಕ್ಕೆ ಪ್ರಸನ್ನ ರಾಜೀನಾಮೆ

ಬೆಂಗಳೂರು : ಸಾಗರ ತಾಲೂಕಿನ ಹೆಗ್ಗೋಡು ಗ್ರಾಮ ಪಂಚಾಯತ್ನ ಹೊನ್ನೇಸರ ಗ್ರಾಮದ ಕೆರೆಕಟ್ಟೆ ಮತ್ತು ಮೈಸೂರು ಜಿಲ್ಲೆಯ ಬದನವಾಳು ಗ್ರಾಮದ ಖಾದಿ ಕೇಂದ್ರದ ಗಾಂಧಿ ಆಶ್ರಮವನ್ನು ನೆಲಸಮಗೊಳಿಸಿರುವುದನ್ನು ವಿರೋಧಿಸಿರುವ ರಂಗಕರ್ಮಿ ಪ್ರಸನ್ನ ಅವರು ಮಹಾತ್ಮಾಗಾಂಧಿ ವಸ್ತ್ರೋದ್ಯಮ ಕೋಶದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಇದೀಗ ಬಹಿರಂಗವಾಗಿದೆ.
ಗ್ರಾಮಸಭೆಗಳ ನಿರ್ಣಯಗಳನ್ನು ಕಡಗಣಿಸಿ ಮಂತ್ರಿಗಳು ಮತ್ತು ಅಧಿಕಾರಿಗಳು ಗ್ರಾಮ ಪಂಚಾಯತ್ ವ್ಯವಸ್ಥೆಯನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದ್ದಾರೆ ಎಂದು ಪ್ರಸನ್ನ ಅವರು ನೇರವಾಗಿ ಮುಖ್ಯಮಂತ್ರಿಗೆ ಪತ್ರ ಬರೆದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಅಲ್ಲದೇ ಮಹಾತ್ಮಾಗಾಂಧಿ ವಸ್ತ್ರೋದ್ಯಮ ಕೋಶದ ಅಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಸ್ವೀಕರಿಸಬೇಕು ಎಂದು ಇದೇ ಪತ್ರದಲ್ಲಿ ಹೇಳಿದ್ದಾರೆ. 2026ರ ಅಕ್ಟೋಬರ್ 12ರಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಗಾಂಧಿವಾದಿ ಮತ್ತು ರಂಗಕರ್ಮಿ ಪ್ರಸನ್ನ ಅವರು ಪತ್ರ ರವಾನಿಸಿದ್ದಾರೆ. ಈ ಪತ್ರದ ಪ್ರತಿಯು "the-file.in"ಗೆ ಲಭ್ಯವಾಗಿದೆ.
ಸಾಗರ ತಾಲೂಕಿನ ಹೊನ್ನೆಸರ ಕೆರೆಯ ಒತ್ತುವರಿ ತೆರವುಗೊಳಿಸಬೇಕು ಎಂದು ಸ್ಥಳೀಯರು ಪಟ್ಟು ಹಿಡಿದಿದ್ದರು. ಈ ಪಟ್ಟಿಗೆ ಮಣಿದಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಸಚಿವ ಈಶ್ವರ್ ಖಂಡ್ರೆ ಅವರು ಒತ್ತುವರಿ ಮಾಡಲಾಗಿದೆ ಎನ್ನಲಾಗಿರುವ ಜಾಗವನ್ನು ತೆರವುಗೊಳಿಸಬೇಕು ಎಂದು ಅಧಿಕಾರಿಗಳಿಗೆ ಗಡುವು ನೀಡಿದ್ದರು.
ಸಚಿವ ಈಶ್ವರ್ ಖಂಡ್ರೆ ಅವರು ನೀಡಿದ್ದ ಗಡುವಿನೊಳಗೇ ಒತ್ತುವರಿಯಾಗಿದೆ ಎಂದು ಹೇಳಲಾಗಿದ್ದ ಜಾಗವನ್ನು ತೆರವುಗೊಳಿಸಿದ್ದರು.
ಈ ಬೆಳವಣಿಗೆ ನಡುವೆಯೇ ರಂಗಕರ್ಮಿ ಹಾಗೂ ಗಾಂಧಿವಾದಿ ಪ್ರಸನ್ನ ಅವರು ಮಹಾತ್ಮಾಗಾಂಧಿ ವಸ್ತ್ರೋದ್ಯಮ ಕೋಶದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಮುನ್ನೆಲೆಗೆ ಬಂದಿದೆ.






