ಸ್ವಾಯತ್ತ ಸಂಸ್ಥೆಗಳ ಸ್ವಾತಂತ್ರ್ಯಹರಣ ಮಾಡುತ್ತಿರುವ ಕೇಂದ್ರ ಸರಕಾರ : ಪ್ರಶಾಂತ್ ಭೂಷಣ್

ಬೆಂಗಳೂರು : ಸ್ವಾತಂತ್ರ್ಯ ನಂತರ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜೀವಂತವಾಗಿರಿಸಲು ಚುನಾವಣಾ ಆಯೋಗ, ಜಾರಿ ನಿರ್ದೇಶನಾಲಯ, ಲೆಕ್ಕನಿಯಂತ್ರಕರು, ನ್ಯಾಯಾಂಗ ವ್ಯವಸ್ಥೆಯಂತಹ ಸ್ವಾಯತ್ತ ಸಂಸ್ಥೆಗಳನ್ನು ರಚಿಸಲಾಯಿತು. ಆದರೆ, ದುರಾದೃಷ್ಟವಶಾತ್ ಇಂದು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರಕಾರ ಸ್ವಾಯತ್ತ ಸಂಸ್ಥೆಗಳ ಸ್ವಾತಂತ್ರ್ಯ ಹರಣ ಮಾಡುತ್ತಿದೆ ಎಂದು ಸುಪ್ರೀಂಕೋರ್ಟ್‍ನ ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ತಿಳಿಸಿದರು.
ಶನಿವಾರ ವಸಂತನಗರದಲ್ಲಿರುವ ದೇವರಾಜ ಅರಸು ಭವನದಲ್ಲಿ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್‍ನ 33ನೆ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ‘ನ್ಯಾಯಾಲಯಗಳ ಮೂಲಕ ನ್ಯಾಯದ ವಿತರಣೆ ಮತ್ತು ಭಾರತದಲ್ಲಿ ಅಲ್ಪಸಂಖ್ಯಾತರ ಸಾಂವಿಧಾನಿಕ ಹಕ್ಕುಗಳು’ ಕುರಿತು ಅವರು ಪ್ರಧಾನ ಭಾಷಣ ಮಾಡಿದರು.
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಸರಕಾರವು, ನಾಗರಿಕರನ್ನು ತುಳಿಯುತ್ತಿದೆ. ದೇಶವನ್ನು ಧರ್ಮದ ಹೆಸರಿನಲ್ಲಿ ವಿಭಜನೆ ಮಾಡಲು, ಅಲ್ಪಸಂಖ್ಯಾತರನ್ನು ಎರಡನೆ ದರ್ಜೆ ನಾಗರಿಕರನ್ನಾಗಿ ಮಾಡಲು ಬಯಸುತ್ತಿದೆ. ದ್ವೇಷವನ್ನು ಬಿತ್ತಿ ಅಧಿಕಾರದಲ್ಲಿ ಇರಲು ಬಯಸಿದೆ. ಸತ್ಯ ಹಾಗೂ ಸುಳ್ಳಿನ ನಡುವಿನ ವ್ಯತ್ಯಾಸ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲದಂತೆ ಜನರ ವೈಜ್ಞಾನಿಕ ಆಲೋಚನೆ ನಾಶ ಮಾಡುತ್ತಿದ್ದಾರೆ ಎಂದು ಅವರು ದೂರಿದರು.
ನ್ಯಾಯಮೂರ್ತಿಗಳ ನೇಮಕದಲ್ಲಿ ಸರಕಾರದ ಹಸ್ತಕ್ಷೇಪವಿದೆ, ಚುನಾವಣಾ ಆಯೋಗದ ಆಯುಕ್ತರ ನೇಮಕದ ಅಧಿಕಾರ ಸರಕಾರದ ಕೈಯಲ್ಲಿ ಇರಬಾರದು ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಆದರೆ, ಹೊಸ ಕಾಯ್ದೆ ತಂದು ಸರಕಾರ ತನ್ನ ಚೇಲಾಗಳನ್ನು ಚುನಾವಣಾ ಆಯೋಗದ ಆಯುಕ್ತರನ್ನಾಗಿ ನೇಮಿಸುತ್ತಿದೆ ಎಂದು ಪ್ರಶಾಂತ್ ಭೂಷಣ್ ಹೇಳಿದರು.
ಬಿಹಾರದಲ್ಲಿ ಚುನಾವಣೆ ನಡೆಯಿತು. 1.50 ಕೋಟಿ ಮಹಿಳೆಯರಿಗೆ 10 ಸಾವಿರ ರೂ., ಒಂದು ಸಾವಿರ ವಿಶೇಷ ರೈಲುಗಳ ಕಾರ್ಯಾಚರಣೆ ನಡೆಸಲಾಯಿತು. ಎಸ್‍ಐಆರ್ ನಲ್ಲಿ ಅನೇಕ ಬದಲಾವಣೆ ಮಾಡಿ 65 ಲಕ್ಷ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಕೈ ಬಿಟ್ಟರು, 22 ಲಕ್ಷ ಜನರ ಹೆಸರು ಸೇರಿಸಿದರು ಅವರು ತಿಳಿಸಿದರು.
ಭಾರತದ ಲೆಕ್ಕನಿಯಂತ್ರಕರು ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ನಡೆಸುವ ಲೆಕ್ಕಪರಿಶೋಧನೆಗೂ, ಬೇರೆ ಪಕ್ಷಗಳ ಸರಕಾರ ಇರುವ ರಾಜ್ಯಗಳಲ್ಲಿ ನಡೆಸುವ ಲೆಕ್ಕಪರಿಶೋಧನೆಗೂ ಅಜಗಜಾಂತರ ವ್ಯತ್ಯಾಸಗಳನ್ನು ಕಾಣಬಹುದು. ಸರಕಾರದ ಸೂಚನೆಯಂತೆ ಲೆಕ್ಕಪರಿಶೋಧನೆ ಮಾಡಲಾಗುತ್ತಿದೆ ಎಂದು ಪ್ರಶಾಂತ್ ಭೂಷಣ್ ದೂರಿದರು.
ಸಂವಿಧಾನದಲ್ಲಿರುವ ಜಾತ್ಯತೀತ ಪದವನ್ನು ಕೈ ಬಿಡಲು ಬಯಸಿದ್ದರು. ಆದರೆ, ಸಾಧ್ಯವಾಗಿಲ್ಲ. ಎನ್‍ಆರ್‌ಸಿ ಮಾಡಲು ಯತ್ನಿಸಿದರು. ಅಸ್ಸಾಂ ನಲ್ಲಿ ಎನ್‍ಆರ್‌ಸಿ ಪ್ರಕ್ರಿಯೆಯಲ್ಲಿ ಹೊರಗುಳಿದ ಶೇ.80ರಷ್ಟು ಜನ ಹಿಂದೂಗಳಾದ್ದರಿಂದ ಅವರಿಗೆ ಪೌರತ್ವ ನೀಡಲು ಸಿಎಎ ತಂದರು. ಅಲ್ಪಸಂಖ್ಯಾತರನ್ನು ಮತದಾರರ ಪಟ್ಟಿಯಿಂದ ಹೊರಗೆ ಇಡಬೇಕು ಎಂಬುದು ಎಸ್‍ಐಆರ್ ಮೂಲ ಉದ್ದೇಶವಾಗಿದೆ ಎಂದು ಪ್ರಶಾಂತ್ ಭೂಷಣ್ ತಿಳಿಸಿದರು.
ಅಯೋಧ್ಯೆ ಪ್ರಕರಣದಲ್ಲಿ ತೀರ್ಪು ನೀಡಿದ ಮುಖ್ಯ ನ್ಯಾಯಮೂರ್ತಿಯಾಗಿದ್ದ ಗೋಗೋಯ್ ಅವರಿಗೆ ರಾಜ್ಯಸಭಾ ಸ್ಥಾನ, ಅಬ್ದುಲ್ ನಝೀರ್ ಅವರಿಗೆ ರಾಜ್ಯಪಾಲ ಹುದ್ದೆ, ಅರುಣ್ ಮಿಶ್ರಾ ಅವರಿಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಸ್ಥಾನ ಹಾಗೂ ಖಾನ್ವಿಲ್ಕರ್ ಅವರನ್ನು ಲೋಕಪಾಲ್ ಮಾಡಲಾಗಿದೆ ಎಂದು ಅವರು ಹೇಳಿದರು.
ಫ್ಯಾಶಿಸ್ಟ್ ವಾದಿ ಸರಕಾರದ ಬಗ್ಗೆ ಅನೇಕ ನ್ಯಾಯಮೂರ್ತಿಗಳು ಭಯಭೀತರಾಗಿದ್ದಾರೆ. ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‍ನಲ್ಲಿ ಮುಖ್ಯ ನ್ಯಾಯಮೂರ್ತಿಯಾಗುವ ಅರ್ಹತೆ ಇರುವ ನ್ಯಾಯಾಧೀಶರ ಮೇಲೆ ತನಿಖಾ ಸಂಸ್ಥೆಗಳ ಮೂಲಕ ಕಣ್ಣಿಡಲಾಗುತ್ತಿದೆ ಎಂದು ಪ್ರಶಾಂತ್ ಭೂಷಣ್ ದೂರಿದರು.
ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್ ರಾಷ್ಟ್ರೀಯ ಉಪಾಧ್ಯಕ್ಷ ಮೌಲಾನಾ ಖಾಲಿದ್ ಸೈಫುಲ್ಲಾ ವಹಿಸಿದ್ದರು. ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹೀಂ, ಮೆಹ್ರೋಝ್ ಖಾನ್, ಆಗಾ ಸುಲ್ತಾನ್, ಆಸೀಮ್ ಸೇಠ್ ಅಫ್ರೋಝ್, ಮುಹಮ್ಮದ್ ಉಬೇದುಲ್ಲಾ ಶರೀಫ್, ಸೈಯದ್ ಅಶ್ರಫ್, ಮೌಲಾನಾ ಅನೀಸುರ್ರಹ್ಮಾನ್, ಮೌಲಾನಾ ನೌಶಾದ್ ಆಲಾಮ್ ಖಾಸ್ಮಿ, ಡಾ.ಯಾಸೀನ್ ಅಲಿ ಉಸ್ಮಾನಿ, ಸುಲೇಮಾನ್ ಖಾನ್, ಸೈಯದ್ ಶಫಿವುಲ್ಲಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
‘ಜನಾಭಿಪ್ರಾಯ ನ್ಯಾಯಾಲಯಗಳ ಮೇಲೆ ಪ್ರಭಾವ ಬೀರುತ್ತದೆ. ಅವರು ಚುನಾವಣೆಗಳನ್ನು ಗೆದ್ದಿರಬಹುದು. ಆದರೆ, ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಜನಾಭಿಪ್ರಾಯ ಈ ಸರಕಾರದ ವಿರುದ್ಧವಿದೆ. ಯಾರೊಬ್ಬರೂ ಹತಾಶರಾಗುವುದು ಬೇಡ. ನಾವು ನಮ್ಮ ಮಾತನ್ನು ಹೇಳುತ್ತಿರಬೇಕು, ಮಾತನಾಡಬೇಕು, ಬೀದಿಗಿಳಿದು ಹೋರಾಡಬೇಕು, ಸತ್ಯಾಗ್ರಹ ಮಾಡಬೇಕು. ಒಂದಲ್ಲ ಒಂದು ದಿನ ಪರಿಸ್ಥಿತಿ ಬದಲಾಗುತ್ತದೆ’
-ಪ್ರಶಾಂತ್ ಭೂಷಣ್, ಸುಪ್ರೀಂಕೋರ್ಟ್ ನ್ಯಾಯವಾದಿ







