ಜಾಗತಿಕ 'ಎಲ್ ನಿನೋ' ಹವಾಮಾನ ವೈಪರೀತ್ಯ ಎದುರಿಸಲು ಮುನ್ನೆಚ್ಚರಿಕೆ

ಬೆಂಗಳೂರು : ಜಾಗತಿಕ ಮಟ್ಟದಲ್ಲಿ ತೀವ್ರಗೊಳ್ಳುತ್ತಿರುವ ‘ಎಲ್ ನಿನೋ' ಹವಾಮಾನ ವೈಪರೀತ್ಯದ ಪರಿಣಾಮವಾಗಿ ಉಂಟಾಗಬಹುದಾದ ತಾಪಮಾನ ಏರಿಕೆ ಹಾಗೂ ಬರದ ಪರಿಸ್ಥಿತಿಯನ್ನು ಎದುರಿಸಲು ರಾಜ್ಯ ಸರಕಾರವು ಸಮಗ್ರ ಹಾಗೂ ದೂರದೃಷ್ಟಿಯ ಕಾರ್ಯತಂತ್ರವನ್ನು ಕೈಗೆತ್ತಿಕೊಂಡಿದೆ.
ಮಂಗಳವಾರ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಪ್ರಕಟನೆ ಹೊರಡಿಸಿದ್ದು, ದಕ್ಷಿಣ ಪೆಸಿಫಿಕ್ ಮಹಾಸಾಗರದ ಕೇಂದ್ರ ಮತ್ತು ಪೂರ್ವ ಭಾಗಗಳಲ್ಲಿ ಸಮುದ್ರದ ಮೇಲ್ಮೈ ನೀರು ಸಾಮಾನ್ಯಕ್ಕಿಂತ ಹೆಚ್ಚು ಕಾಯುವ ವಿದ್ಯಮಾನವನ್ನು ‘ಎಲ್ ನಿನೋ' ಎನ್ನಲಾಗುತ್ತದೆ. ಈ ಘಟನೆಯು ಜಾಗತಿಕ ಗಾಳಿಯ ಮಾದರಿ ಹಾಗೂ ಮಳೆಯ ಪ್ರಮಾಣವನ್ನು ಏರುಪೇರು ಮಾಡುತ್ತದೆ. 150 ವರ್ಷಗಳಲ್ಲೇ ಪ್ರಬಲ ಎಲ್ ನಿನೋ ಆವರಿಸುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ ಎಂದಿದ್ದಾರೆ ಎಂದಿದ್ದಾರೆ.
ಹೀಗಾಗಿ ಭಾರತದಲ್ಲಿ ವಿಶೇಷವಾಗಿ ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಮಳೆ ಕ್ಷೀಣಿಸಿ ಬರದ ಛಾಯೆ ಮೂಡುವ ಭೀತಿ ಎದುರಾಗಿದೆ. ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರ ನೀಡಿದ ಸೂಚನೆಯಂತೆ, ಈ ಹವಾಮಾನ ವೈಪರೀತ್ಯವು 2027ರ ಮೇ ತಿಂಗಳವರೆಗೆ ಮುಂದುವರಿಯುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.
ಸಾಮಾನ್ಯ ತಾಪಮಾನಕ್ಕಿಂತ ಹೆಚ್ಚು ಉಷ್ಣಾಂಶ ದಾಖಲಾಗಲಿದ್ದು, ತೀವ್ರ ಕಾವು ಉಂಟಾಗಲಿದೆ.ಮುಂಗಾರು ವೈಫಲ್ಯ ಹಾಗೂ ಜಲಕ್ಷಾಮ, ಮಳೆಯ ಕೊರತೆಯಿಂದ ಜಲಾಶಯಗಳ ಮಟ್ಟ ಕುಸಿದು, ಕೃಷಿ ಹಾಗೂ ಕುಡಿಯುವ ನೀರಿಗೆ ಅಭಾವ ತಲೆದೋರಬಹುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಹೀಗಾಗಿ ಬೋರ್‍ವೆಲ್ ಮರುಪೂರಣ ಮತ್ತು ಅಂತರ್ಜಲ ರಕ್ಷಣೆ, ರಾಜ್ಯದಲ್ಲಿರುವ ಸುಮಾರು 37 ಲಕ್ಷ ಬೋರ್‍ವೆಲ್‍ಗಳ ಸಮಗ್ರ ಮಾಹಿತಿಯನ್ನು ಆನ್‍ಲೈನ್‍ನಲ್ಲಿ ದಾಖಲಿಸಲಾಗುತ್ತಿದೆ. ಬೋರ್‍ವೆಲ್‍ಗಳ ತಾಂತ್ರಿಕ ಪರಿಶೀಲನೆ, ರಿಪೇರಿ ಮತ್ತು ಮರುಪೂರಣ ಕಾರ್ಯಗಳಿಗಾಗಿ ವಿಶೇಷ ತರಬೇತಿ ನೀಡಲಾಗುತ್ತಿದ್ದು, ಪ್ರತಿ 15 ದಿನಗಳಿಗೊಮ್ಮೆ ಪ್ರಗತಿ ಪರಿಶೀಲನೆ ನಡೆಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ನೀರಿನ ಸರಿಯಾದ ನಿರ್ವಹಣೆಗಾಗಿ ‘ಜಲ ಆಯವ್ಯಯ' ಜಾರಿಗೆ ತರಲಾಗುತ್ತಿದೆ. ಮಳೆ ಅಭಾವದಿಂದ ಉಂಟಾಗುವ ನಷ್ಟ ತಪ್ಪಿಸಲು ರೈತರು ಕಡಿಮೆ ನೀರು ಬಳಸುವ ಮತ್ತು ತೀವ್ರ ಶಾಖವನ್ನು ತಡೆಯಬಲ್ಲ ಬೆಳೆಗಳನ್ನು ಬೆಳೆಯಲು ಸರಕಾರ ಉತ್ತೇಜಿಸುತ್ತಿದೆ ಎಂದು ಅವರು ಹೇಳಿದ್ದಾರೆ.
‘ತೀವ್ರವಾಗಿ ಅಂತರ್ಜಲ ಕುಸಿದಿರುವ ಪ್ರದೇಶಗಳಲ್ಲಿ ಹೊಸ ಬೋರ್‍ವೆಲ್ ಕೊರೆಯುವುದನ್ನು ನಿರ್ಬಂಧಿಸಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮಳೆನೀರು ಸಂಗ್ರಹಣೆ, ವಿವಿಧ ಚೆಕ್ ಡ್ಯಾಮ್‍ಗಳ ನಿರ್ಮಾಣ ಹಾಗೂ ಸಾಂಪ್ರದಾಯಿಕ ನೀರಿನ ಮೂಲಗಳ ಪುನರುಜ್ಜೀವನವನ್ನು ಕೈಗೆತ್ತಿಕೊಳ್ಳಲಾಗಿದೆ. ಸಂಸ್ಕರಿಸಿದ ತ್ಯಾಜ್ಯ ನೀರನ್ನು ಕೈಗಾರಿಕೆ, ಉದ್ಯಾನವನ ಹಾಗೂ ನಿರ್ಮಾಣ ಕಾಮಗಾರಿಗಳಿಗೆ ಬಳಸುವ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದು ಡಾ.ಶಾಲಿನಿ ರಜನೀಶ್ ಹೇಳಿದ್ದಾರೆ.






