ಇನ್ವೆಸ್ಟ್ ಕರ್ನಾಟಕ 2025 | ಮುಂದಿನ ಐದು ವರ್ಷಗಳಲ್ಲಿ 20 ಲಕ್ಷ ಉದ್ಯೋಗಗಳ ಸೃಷ್ಟಿ : ಪ್ರಿಯಾಂಕ್ ಖರ್ಗೆ

ಬೆಂಗಳೂರು: ರಾಜ್ಯ ಸರಕಾರ ಘೋಷಿಸಿರುವ ಹೊಸ ಕೈಗಾರಿಕಾ ನೀತಿಯಿಂದಾಗಿ ಮುಂದಿನ ಐದು ವರ್ಷಗಳಲ್ಲಿ 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಲಾಗಿದ್ದು, 7.5 ಲಕ್ಷ ಕೋಟಿ ರೂ. ಹೂಡಿಕೆಗಳನ್ನು ಆಕರ್ಷಿಸುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಶುಕ್ರವಾರ ನಗರದ ಅರಮನೆ ಮೈದಾನದಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯ ಸರಕಾರದ 30ಕ್ಕೂ ಮಿಗಿಲು ಇಲಾಖೆಗಳ ಮೂಲಕ 150ಕ್ಕೂ ಹೆಚ್ಚಿನ ವ್ಯಾಪಾರ ವೇದಿಕೆ ಸೃಷ್ಟಿಗೊಳ್ಳಲಿದ್ದು ಉದ್ದಿಮೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಏಕಗವಾಕ್ಷಿ ಸೇವೆಯನ್ನು ಪರಿಚಯಿಸಲಾಗುವುದು ಎಂದರು.
ನವೋದ್ಯಮಗಳ ಸ್ಥಾಪನೆಯಲ್ಲಿ ಕರ್ನಾಟಕ ಇಡೀ ರಾಷ್ಟ್ರದಲ್ಲಿಯೇ ಅತ್ಯುನ್ನತ ಸ್ಥಾಯಿಯಲ್ಲಿದ್ದು, ಜೈವಿಕ ತಂತ್ತಜ್ಞಾನ, ನಾವೀನ್ಯತೆ, ಎಂಜನಿಯರಿಂಗ್, ಗೆಫೆಕ್ಸ್, ಹೆಲ್ತ್‍ಕೇರ್ ಮುಂತಾದ ಕ್ಷೇತ್ರಗಳಲ್ಲಿ ಕರ್ನಾಟಕ ಮುಂದಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಜಾಗತಿಕ ಹೂಡಿಕೆದಾರರಿಗೆ ಕರ್ನಾಟಕದಲ್ಲಿ ಎಲ್ಲಾ ಅನುಕೂಲತೆಗಳೂ ಇದ್ದು, ಉದ್ದಿಮೆಗಳ ಸ್ಥಾಪನೆಗೆ ರಾಜ್ಯ ಎಲ್ಲಾ ರೀತಿಯಲ್ಲಿ ಒತ್ತಾಸೆ ನೀಡುತ್ತದೆ, ನಮ್ಮಲ್ಲಿ ಸಂಪನ್ಮೂಲಗಳು ಮಾತ್ರವಲ್ಲದೆ, ಕೌಶಲ್ಯವೂ ಸೇರಿ ಹೂಡಿಕೆದಾರರಿಗೆ ಉತ್ತಮ ವಾತಾವರಣ ಕಲ್ಪಿಸುತ್ತದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಕೇಂದ್ರ ಸಚಿವ ವಿ.ಸೋಮಣ್ಣ, ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.







