ನಾಸ್ಕಾಮ್ ಸಂಸ್ಥೆಯೊಂದಿಗೆ ರಾಜ್ಯ ಸರಕಾರದ ಒಪ್ಪಂದ : ಸಚಿವ ಪ್ರಿಯಾಂಕ್ ಖರ್ಗೆ
‘ನಾವೀನ್ಯತೆ ಮತ್ತು ಬೌದ್ಧಿಕ ಆಸ್ತಿ ಬೆಳವಣಿಗೆಗೆ ಉತ್ತೇಜನ’

ಬೆಂಗಳೂರು : ನಾವೀನ್ಯತೆ ಮತ್ತು ಬೌದ್ಧಿಕ ಆಸ್ತಿ ಬೆಳವಣಿಗೆಯನ್ನು ಉತ್ತೇಜಿಸುವ ಗುರಿಯೊಂದಿಗೆ ರಾಜ್ಯ ಸರಕಾರದ ಕರ್ನಾಟಕ ಇನ್ನೋವೇಶನ್ ಮತ್ತು ಟೆಕ್ನಾಲಜಿ ಸೊಸೈಟಿ(ಕಿಟ್ಸ್), ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು ನಾಸ್ಕಾಮ್ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಗುರುವಾರ ನಗರದ ಇನ್ಫೆಂಟ್ರಿ ರಸ್ತೆಯಲ್ಲಿರುವ ಐಎಎಸ್ ಅಧಿಕಾರಿಗಳ ಸಂಘದ ಸಭಾಂಗಣದಲ್ಲಿ ಪ್ರಿಯಾಂಕ್ ಖರ್ಗೆ ಹಾಗೂ ನಾಸ್ಕಾಮ್ ಅಧ್ಯಕ್ಷ ರಾಜೇಶ್ ನಂಬಿಯಾರ್ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಆವಿಷ್ಕಾರವನ್ನು ಪೋಷಿಸುವ ತಂತ್ರಜ್ಞಾನ ವಲಯಕ್ಕೆ ಅನುಕೂಲಕರ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ರಾಜ್ಯ ಸರಕಾರ ತನ್ನ ಬದ್ಧತೆಯನ್ನು ಹೊಂದಿದೆ. ತಂತ್ರಜ್ಞಾನ ಕ್ಷೇತ್ರದ ಆವಿಷ್ಕಾರದಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿ ಮುಂದುವರೆದಿದ್ದು, ಆ ಸ್ಥಾನವನ್ನು ಉಳಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ನಾಸ್ಕಾಮ್ ನೊಂದಿಗಿನ ಈ ಸಹಯೋಗವು ಆವಿಷ್ಕಾರದ ದಿಕ್ಕಿನಲ್ಲಿ ಒಂದು ಪ್ರಮುಖ ಹೆಜ್ಜೆಯಾಗಿದೆ. ಇದು ರಾಜ್ಯಾದ್ಯಂತ ನಾವೀನ್ಯತೆಯನ್ನು ಹೆಚ್ಚಿಸಲು ಉದ್ಯಮ, ಶೈಕ್ಷಣಿಕ ಮತ್ತು ಸರಕಾರದ ನಡುವಿನ ತಡೆರಹಿತ ಸಹಯೋಗದಿಂದ ಬೌದ್ಧಿಕ ಆಸ್ತಿಯ ಮೇಲೆ ರಚನಾತ್ಮಕ ಬೆಂಬಲ ಮತ್ತು ಮಾರ್ಗದರ್ಶನವನ್ನು ನೀಡುವ ಮೂಲಕ ಕರ್ನಾಟಕದಲ್ಲಿ ತಂತ್ರಜ್ಞಾನ ಉದ್ಯಮವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.
ನಾಸ್ಕಾಮ್ ಅಧ್ಯಕ್ಷ ರಾಜೇಶ್ ನಂಬಿಯರ್ ಮಾತನಾಡಿ, ಕಿಟ್ಸ್ ಸಂಸ್ಥೆ ಜೊತೆಗಿನ ಪಾಲುದಾರಿಕೆಯು ಭಾರತದಲ್ಲಿ ನಾವೀನ್ಯತೆ ಮತ್ತು ಬೌದ್ಧಿಕ ಆಸ್ತಿ ಲ್ಯಾಂಡ್ ಸ್ಕೇಪ್ ಅನ್ನು ಬಲಪಡಿಸುವ ಉದ್ಯಮದ ಬದ್ಧತೆಯನ್ನು ಒತ್ತಿ ಹೇಳುತ್ತದೆ. ರಾಜ್ಯ ಸರಕಾರದೊಂದಿಗೆ ನಿಕಟವಾಗಿ ಕೆಲಸ ಮಾಡುವ ಮೂಲಕ ನಾವು ಎಲ್ಲಾ ವ್ಯವಹಾರಗಳನ್ನು ತಮ್ಮ ಬೌದ್ಧಿಕ ಆಸ್ತಿಯನ್ನು ರಕ್ಷಿಸಲು ಮತ್ತು ಹತೋಟಿಗೆ ತರಲು, ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡಲು ಮತ್ತು ನಾವೀನ್ಯತೆಯಲ್ಲಿ ಭಾರತವನ್ನು ಜಾಗತಿಕ ನಾಯಕನಾಗಿ ಸ್ಥಾಪಿಸಲು ಸಬಲೀಕರಣಗೊಳಿಸುತ್ತೇವೆ ಎಂದು ಹೇಳಿದರು.
ಈ ಸಹಯೋಗವು ಬೌದ್ಧಿಕ ಆಸ್ತಿ ರಚನೆ ಮತ್ತು ಸಂರಕ್ಷಣಾ ಕಾರ್ಯವಿಧಾನಗಳ ಮೂಲಕ ಕರ್ನಾಟಕದ ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ವೇಗವರ್ಧನೆ ಮಾಡುವ ಗುರಿಯನ್ನು ಹೊಂದಿದೆ. ತಂತ್ರಜ್ಞಾನದಲ್ಲಿ ರಾಜ್ಯದ ನಾಯಕತ್ವವನ್ನು ಭದ್ರಪಡಿಸುತ್ತದೆ ಮತ್ತು ಭಾರತದಾದ್ಯಂತ ಡಿಜಿಟಲ್ ಆವಿಷ್ಕಾರವನ್ನು ಚಾಲನೆ ಮಾಡಲು ಮಾದರಿ ಚೌಕಟ್ಟನ್ನು ರಚಿಸುತ್ತದೆ ಎಂದು ರಾಜೇಶ್ ನಂಬಿಯಾರ್ ತಿಳಿಸಿದರು.
ಒಪ್ಪಂದದಲ್ಲಿರುವ ಅಂಶಗಳು: ರಚನಾತ್ಮಕ ಮಾರ್ಗದರ್ಶನ ಮತ್ತು ಬೆಂಬಲ ಕಾರ್ಯವಿಧಾನಗಳ ಮೂಲಕ ಕರ್ನಾಟಕದಲ್ಲಿ ನಾವೀನ್ಯತೆ ಮತ್ತು ಪೇಟೆಂಟ್ ಫೈಲಿಂಗ್‍ಗಳನ್ನು ಉತ್ತೇಜಿಸಲು ಬೌದ್ಧಿಕ ಆಸ್ತಿ ಸಕ್ರಿಯಗೊಳಿಸುವಿಕೆ ಕಾರ್ಯಕ್ರಮವನ್ನು ಸ್ಥಾಪಿಸುವುದು ಮತ್ತು ನಿರ್ವಹಿಸುವುದು. ಶೈಕ್ಷಣಿಕ ಸಂಸ್ಥೆಗಳಾದ್ಯಂತ ಬೌದ್ಧಿಕ ಆಸ್ತಿ ಮಾರ್ಗದರ್ಶನ, ಜಾಗೃತಿ ಕಾರ್ಯಾಗಾರಗಳು ಮತ್ತು ಸಾಮಥ್ರ್ಯ ನಿರ್ಮಾಣದ ಉಪಕ್ರಮಗಳ ಮೂಲಕ ಸಮಗ್ರ ತಾಂತ್ರಿಕ ಬೆಂಬಲವನ್ನು ತಲುಪಿಸುವುದು.
ಕಾರ್ಯತಂತ್ರದ ಉದ್ಯಮ ಪಾಲುದಾರಿಕೆಗಳು, ನೀತಿ ಚೌಕಟ್ಟುಗಳು ಮತ್ತು ರಿಯಾಯತಿ ದರದ ಕಾನೂನು ಸಮಾಲೋಚನೆಯ ಮೂಲಕ ಬೌದ್ಧಿಕ ಆಸ್ತಿ ಬೆಳವಣಿಗೆಗೆ ಬೆಂಬಲ ಪರಿಸರ ವ್ಯವಸ್ಥೆಯನ್ನು ರಚಿಸುವುದು. ಪೇಟೆಂಟ್‍ಗೆ ಅಗತ್ಯವಿರುವ ರೂಪುರೇಷೆಗಳು ಮತ್ತು ಅಂತರ ಇಲಾಖೆಯ ಸಮನ್ವಯದ ಮೂಲಕ ಕಾರ್ಯಕ್ರಮದ ಯಶಸ್ಸನ್ನು ಮೇಲ್ವಿಚಾರಣೆ ಮಾಡುವಾಗ ಅಗತ್ಯ ಮೂಲಸೌಕರ್ಯ ಮತ್ತು ಆಡಳಿತಾತ್ಮಕ ಬೆಂಬಲವನ್ನು ಒದಗಿಸುವುದಾಗಿದೆ.
ಈ ಸಂದರ್ಭದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಏಕರೂಪ್ ಕೌರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







